ನವದೆಹಲಿ: ‘ರಾಹುಲ್ ಗಾಂಧಿ ಅವರ ಸಂದೇಶದಂತೆ ಪ್ರತಿ ಕ್ಷೇತ್ರದಲ್ಲಿ ಪಕ್ಷದ ಕಾನೂನು ಘಟಕ ರಚನೆಯಾಗಬೇಕು. ಪ್ರತಿ ಬೂತ್‌ನಲ್ಲಿ ಮತದಾರರ ಪಟ್ಟಿ ಪರಿಶೀಲನೆ ಆಗಬೇಕು. ಕಾರ್ಯಕರ್ತರು, ಎಲ್ಲಾ ಸಮುದಾಯಗಳನ್ನು ರಕ್ಷಣೆ ಮಾಡಬೇಕು. ಆಗ ಮಾತ್ರ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲು ಸಾಧ್ಯ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಎಐಸಿಸಿ ಕಾನೂನು, ಮಾನವೀಯ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗವು ಇಲ್ಲಿ ಶನಿವಾರ ಆಯೋಜಿಸಿದ್ದ ‘ಸಾಂವಿಧಾನಿಕ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದಂತೆ ಸಂವಿಧಾನ ರಕ್ಷಣೆಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷದ ವಕೀಲರ ಸಮಿತಿ(ಅಡ್ವೊಕೇಟ್ ಬ್ಯಾಂಕ್) ರಚಿಸಬೇಕು. ಆ ಮೂಲಕ ಪ್ರತಿ ಕ್ಷೇತ್ರದ ಮತದಾರರ ಹಕ್ಕು ಹಾಗೂ ಕಾರ್ಯಕರ್ತರ ರಕ್ಷಣೆ ಮಾಡಬೇಕು’ ಎಂದು ತಿಳಿಸಿದರು.
‘ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ವೇಳೆ ಕರ್ನಾಟಕದಲ್ಲಿ 24 ದಿನಗಳು ಪಾದಯಾತ್ರೆ ಮಾಡಿದರು. ಅವರು ಹೆಜ್ಜೆ ಇಟ್ಟ ಕ್ಷೇತ್ರಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಗೆದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸಿದೆ. ಇದು ಅವರು ಕೊಟ್ಟಿರುವ ಶಕ್ತಿ. ರಾಹುಲ್ ಗಾಂಧಿ ಅವರು ನೀಡಿರುವ ಸಂದೇಶದಂತೆ ಪಕ್ಷದ ಕಾನೂನು ಘಟಕ ಪ್ರತಿ ಕ್ಷೇತ್ರ ಮಟ್ಟದವರೆಗೆ ರಚನೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.