ADVERTISEMENT

ಡಿಕೆಶಿ, ಚಿದಂಬರಂ ವಿರುದ್ಧ ಒಂದೇ ಅರ್ಜಿ: ಸುಪ್ರೀಂ ಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 23:06 IST
Last Updated 15 ನವೆಂಬರ್ 2019, 23:06 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ನವದೆಹಲಿ: ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿರುವ ದೆಹಲಿ ಹೈಕೋರ್ಟ್‌ನ ಆದೇಶದ ಸಿಂಧುತ್ವ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿತು.

ಇ.ಡಿ. ಸಲ್ಲಿಸಿದ್ದ ಹೇಳಿಕೆಯಲ್ಲಿ ಶಿವಕುಮಾರ್ ಅವರನ್ನು ‘ಕೇಂದ್ರದ ಮಾಜಿ ಗೃಹ ಮತ್ತು ಹಣಕಾಸು ಸಚಿವ’ ಎಂದು ನಮೂದಿಸಿರುವ ಅಂಶದ ಕುರಿತು ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ನೇತೃತ್ವದ ಪೀಠ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹೇಳಿಕೆ ಸಲ್ಲಿಸಿದ್ದ ಇ.ಡಿ ಅಧಿಕಾರಿಗಳು, ಅದೇ ದಾಖಲೆಯಲ್ಲಿನ ಅಂಶವನ್ನು ಯಥಾವತ್ತಾಗಿ ಬಳಸಿಕೊಂಡಿದ್ದಾರೆ (ಕಾಪಿ ಪೇಸ್ಟ್). ಅಧಿಕಾರಿಗಳು ಕೋರ್ಟ್‌ ಆದೇಶಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

ಶಿವಕುಮಾರ್‌ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಸೆಕ್ಷನ್‌ 45ರ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂಬ ಉಲ್ಲೇಖದ ಕುರಿತೂ ನ್ಯಾಯಪೀಠ ಕೆಂಡ ಕಾರಿತು.

ಕೇವಲ ಅನುಮಾನಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಅನುವು ಮಾಡಿಕೊಡುವ ಮೂಲಕ ಆರೋಪಿಯ ಸ್ವಾತಂತ್ರ್ಯದ ಹಕ್ಕು ಮೊಟಕುಗೊಳಿಸುವ ಈ ಸೆಕ್ಷನ್‌ ಅನ್ನು 2017ರಲ್ಲಿಯೇ ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಆದರೂ ಅದೇ ಸೆಕ್ಷನ್‌ ಬಳಸಿರುವ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಯು ಜನರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಪೀಠ ಕುಟುಕಿತು.

ರದ್ದಾದ ಸೆಕ್ಷನ್‌ನ ಪುನರುತ್ಥಾನಕ್ಕೆ ಇ.ಡಿ. ಮುಂದಾಗಿದೆ ಎಂದು ಶಿವಕುಮಾರ್‌ ಪರ ವಕೀಲರಾದ ಮುಕುಲ್‌ ರೋಹಟ್ಗಿ ಹಾಗೂ ಅಭಿಷೇಕ್‌ ಮನು ಸಿಂಘ್ವಿ ನ್ಯಾಯಪೀಠದ ಗಮನ ಸೆಳೆದ ಕೂಡಲೇ ನ್ಯಾಯಮೂರ್ತಿ ನಾರಿಮನ್‌ ಆಕ್ರೋಶ ವ್ಯಕ್ತಪಡಿಸಿದರು. ‘ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನೀಡಲಾದ ತೀರ್ಪನ್ನು ಓದುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದರು.

ಆದಾಯ ತೆರಿಗೆ ಇಲಾಖೆಯ ತನಿಖೆ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನೂ ಇದೇ ವೇಳೆ ನಡೆಸಿದ ಪೀಠವು, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆಗೆ ನೋಟಿಸ್‌ ಜಾರಿ ಮಾಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದೂ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.