ಎಂ.ಕೆ. ಸ್ಟಾಲಿನ್ ಮತ್ತು ಕಮಲ್ ಹಾಸನ್
ಚೆನ್ನೈ: ರಾಜ್ಯಸಭೆಗೆ ಜೂನ್ 19ರಂದು ನಡೆಯಲಿರುವ ಚುನಾವಣೆಯಲ್ಲಿ ತಮಿಳುನಾಡಿನ 6 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಡಳಿತಾರೂಢ ಡಿಎಂಕೆ ಬುಧವಾರ ಹೇಳಿದೆ. ಮಿತ್ರಪಕ್ಷವಾದ, ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಟ್ಟಿದೆ.
ರಾಜ್ಯಸಭೆಯ ಹಾಲಿ ಸದಸ್ಯ ಹಾಗೂ ಹಿರಿಯ ವಕೀಲ ಪಿ. ವಿಲ್ಸನ್ ಅವರು ಪಕ್ಷದ ಅಭ್ಯರ್ಥಿಯಾಗಿ ಪುನಃ ಕಣಕ್ಕೆ ಇಳಿಯಲಿದ್ದಾರೆ. ಎಸ್.ಆರ್. ಶಿವಲಿಂಗಂ ಮತ್ತು ರುಕಯ್ಯಾ ಮಲಿಕ್ ಅವರು ಪಕ್ಷದಿಂದ ಕಣಕ್ಕೆ ಇಳಿಯಲಿರುವ ಇನ್ನಿಬ್ಬರು ಅಭ್ಯರ್ಥಿಗಳು. ಶಿವಲಿಂಗಂ ಅವರು ಪಕ್ಷದ ಮುಖಂಡ, ರುಕಯ್ಯಾ ಅವರು ಪಕ್ಷದ ಪದಾಧಿಕಾರಿ ಹಾಗೂ ಲೇಖಕಿ.
ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಪಕ್ಷದ ಜೊತೆ 2024ರ ಲೋಕಸಭಾ ಚುನಾವಣೆಗೆ ಮೊದಲು ಮಾಡಿಕೊಂಡ ಒಪ್ಪಂದಕ್ಕೆ ಅನುಗುಣವಾಗಿ ಆ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ ಎಂದು ಡಿಎಂಕೆ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಂಕೆಯ ಅನ್ಬುಮಣಿ ರಾಮದಾಸ್, ಎಂಡಿಎಂಕೆ ನಾಯಕ ವೈಕೊ ಸೇರಿದಂತೆ ತಮಿಳುನಾಡಿನ ಆರು ಮಂದಿ ಸದಸ್ಯರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.
ತನ್ನ ಹಾಗೂ ಮಿತ್ರಪಕ್ಷಗಳ ಸದಸ್ಯರ ಬೆಂಬಲದೊಂದಿಗೆ ಡಿಎಂಕೆ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಅವಕಾಶ ಇದೆ. ಎಐಎಡಿಎಂಕೆ ಪಕ್ಷವು ಬಿಜೆಪಿ ಸೇರಿದಂತೆ ತನ್ನ ಮಿತ್ರಪಕ್ಷಗಳ ನೆರವಿನಿಂದ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.