ADVERTISEMENT

ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ

ಪಿಟಿಐ
Published 25 ಡಿಸೆಂಬರ್ 2025, 10:55 IST
Last Updated 25 ಡಿಸೆಂಬರ್ 2025, 10:55 IST
<div class="paragraphs"><p>ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌</p></div>

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌

   

ಕೃಪೆ: ಪಿಟಿಐ

ಚೆನ್ನೈ: ತಮಿಳುನಾಡಿನಲ್ಲಿ ಕಮಲ (ಬಿಜೆಪಿ) ಅರಳಲು ಅವಕಾಶ ಮಾಡಿಕೊಟ್ಟಿದ್ದೇ ಡಿಎಂಕೆ. ಆ ಪಕ್ಷವು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಆರೋಪಿಸಿದ್ದಾರೆ.

ADVERTISEMENT

ಟಿವಿಕೆ ಪಕ್ಷದ ಸಭೆಗಳು ಯಶಸ್ವಿಯಾಗಿ ನಡೆಯುತ್ತಿರುವನ್ನು ನೋಡಿ ರಾಜಕೀಯ ವಿರೋಧಿಗಳು ಕಂಗೆಟ್ಟಿದ್ದಾರೆ. ಅವರ ಮುಖವಾಡಗಳು ಕಳಚಿಬೀಳುತ್ತಿವೆ ಎಂದು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ನಮ್ಮ ಓಟಕ್ಕೆ ತಡೆಯೊಡ್ಡಲು ನಡೆಸಿದ ಸಂಚುಗಳು ವಿಫಲವಾಗಿವೆ. ನಾವು ಕಾಂಚೀಪುರಂ, ಪುದುಚೇರಿ ಹಾಗೂ ಈರೋಡ್‌ನಲ್ಲಿ ಯಶಸ್ವಿಯಾಗಿ ಸಮಾವೇಶಗಳನ್ನು ಆಯೋಜಿಸಿದ್ದೇವೆ. ನಮ್ಮನ್ನು ತಡೆಯಲು ಯತ್ನಿಸಿದ್ದವರು, ಜನರು ನಮ್ಮೊಂದಿಗೆ ನಿಂತಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ' ಎಂದು ತಿವಿದಿದ್ದಾರೆ.

ಡಿಎಂಕೆ ಮುಖವಾಣಿ 'ಮುರಸೋಲಿ'ಯ ಸಂಪಾದಕೀಯದಲ್ಲಿ ಟಿವಿಕೆ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು ಎಂದು ಕುಟುಕಿದ್ದಾರೆ.

'ಅವರೀಗ ತಮ್ಮ ಗುರುತು ಮರೆಮಾಡಿಕೊಳ್ಳಲು ಮುಖಗವಸು ತೊಡಲಾರಂಭಿಸಿದ್ದಾರೆ. ಕಲ್ಲು ತೂರುತ್ತಿರುವ ಆ ಪಕ್ಷದ ನಾಯಕ, ಮುಖ್ಯಮಂತ್ರಿ (ಎಂ.ಕೆ. ಸ್ಟಾಲಿನ್‌), ತಾವು ಕನ್ನಡಿಯ ಎದುರು ನಿಂತಿರುವುದನ್ನು ಮರೆತಿದ್ದಾರೆ' ಎಂದು ಗುಡುಗಿದ್ದಾರೆ.

'ಸಾಮಾನ್ಯ ಕನಿಷ್ಠ ಮಾರ್ಗಸೂಚಿಯ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿರುವ ಡಿಎಂಕೆ, 1999–2003ರ (ವಾಜಪೇಯಿ ಸರ್ಕಾರದ ವೇಳೆ) ಗುಲಾಮಗಿರಿ ಮಾಡಿತ್ತು. ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ಮಾಡಿಕೊಟ್ಟಿತ್ತು' ಎಂದು ಗುಡುಗಿದ್ದಾರೆ.

ಟಿವಿಕೆ ಸದಸ್ಯರು, ಡಿಎಂಕೆ ನಾಯಕರ ಭಾಷಣಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರೊಂದಿಗೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕರೂರು ದುರಂತ
ಟಿಎಂಕೆ ಪಕ್ಷ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಕರೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು.

ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿದೆ. ಆದರೆ, ಆ ಹೊಣೆಯನ್ನು ಮದ್ರಾಸ್‌ ಹೈಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.