ನಿರ್ಮಲಾ ಸೀತಾರಾಮನ್
ಪಿಟಿಐ ಚಿತ್ರ
ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಚಾರದ ವೇಳೆ ಹೇಳಿಕೊಳ್ಳಲು ಯಾವುದೇ ಸಾಧನೆಗಳನ್ನು ಮಾಡದ ಆಡಳಿತಾರೂಢ ಡಿಎಂಕೆ ಪಕ್ಷ, ಹಿಂದಿ ಹೇರಿಕೆ ಮತ್ತು ಲೋಕಸಭೆ ಕ್ಷೇತ್ರ ಮರುವಿಂಗಣೆಯಂತಹ ಭಾವನಾತ್ಮಕ ಅಂಶಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಆರೋಪಿಸಿದ್ದಾರೆ.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿರುವ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದ್ದಾರೆ.
'ಮಹಿಳೆಯರಿಗೆ ಏನಾಗುತ್ತಿದೆ? ಆರೋಪಿ ನಿಮ್ಮ ಪಕ್ಷದ ಕಾರ್ಯಕರ್ತನೇ ಅಥವಾ ಇಲ್ಲವೇ? ಕಲ್ಲಕುರಿಚಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಉತ್ತರವೇನು' ಎಂದು ಸರ್ಕಾರವನ್ನು ಕೇಳಿದ್ದಾರೆ.
ತಮಿಳುನಾಡಿನ ಕಲ್ಲಕುರಿಚ್ಚಿಯಲ್ಲಿ ನಕಲಿ ಮದ್ಯ ಸೇವಿಸಿ 65ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರಂತ 2024ರ ಜುಲೈನಲ್ಲಿ ಸಂಭವಿಸಿತ್ತು.
ನಿಮ್ಮ ಸರ್ಕಾರ ತಮಿಳುನಾಡಿನ ಜನರಿಗಾಗಿ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳೇನು ಎಂದು ಡಿಎಂಕೆಯನ್ನು ಪ್ರಶ್ನಿಸಿರುವ ಕೇಂದ್ರ ಸಚಿವೆ, 'ಸಾಧನೆ ಏನೂ ಇಲ್ಲದ ಕಾರಣ, ನಿಮ್ಮ ಅಸಮರ್ಥತೆ, ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಸಲುವಾಗಿ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರುತ್ತಿದ್ದೀರಿ' ಎಂದು ಗುಡುಗಿದ್ದಾರೆ.
'ಸಾಧನೆಗಳೇನೂ ಇಲ್ಲದಿರುವಾಗ ಹಾಗೂ ಹಗರಣಗಳು ಹೊರಬರುತ್ತಿರುವಾಗ, 2026ರ ಚುನಾವಣೆಯನ್ನು ಹೇಗೆ ಎದುರಿಸುವಿರಿ? ಕ್ಷೇತ್ರ ಮರುವಿಂಗಣೆ ವಿಚಾರವನ್ನು ಕೈಗೆತ್ತಿಕೊಳ್ಳಿ' ಎಂದು ಕುಟುಕಿದ್ದಾರೆ.
ಮುಂದುವರಿದು, ಕ್ಷೇತ್ರ ಮರುವಿಂಗಣೆಯಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷವೇ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
'ಅವರ (ಡಿಎಂಕೆ) ಬಳಿ 2026ರ ಚುನಾವಣಾ ಪ್ರಚಾರದ ವೇಳೆ ಹೇಳಿಕೊಳ್ಳಲು ಏನೂ ಇಲ್ಲ. ಹಾಗಾಗಿ, ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ತಮಿಳುನಾಡನ್ನು 1960, 1980ರ ದಶಕಕ್ಕೆ ಕರೆದೊಯ್ಯುತ್ತಿದ್ದಾರೆ. ಇದೂ (ಕ್ಷೇತ್ರ ಮರುವಿಂಗಣೆ ಕುರಿತ ಸಭೆ) ಅಂತಹದ್ದೇ ಪ್ರಯತ್ನ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ' ಎಂದು ಹೇಳಿದ್ದಾರೆ.
ಹಿಂದಿ ಹೇರಿಕೆ ವಿವಾದದ ಕುರಿತು, ಶಾಲಾ ದಿನಗಳಿಂದಲೂ ಇಂತಹ 'ಸುಳ್ಳು ಪ್ರಚಾರ'ವನ್ನು ನೋಡಿದ್ದೇನೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಮತ್ತು ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಂಘಟಿಸಿರುವ 'ಜಂಟಿ ಕ್ರಿಯಾ ಸಮಿತಿ'ಯ ಮೊದಲ ಸಭೆ ಚೆನ್ನೈನಲ್ಲಿ ಶನಿವಾರ ನಡೆಯಿತು. ಕರ್ನಾಟಕ ಸರ್ಕಾರದ ಪರವಾಗಿ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ಸಭೆ ಹೈದರಾಬಾದ್‌ನಲ್ಲಿ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.