ADVERTISEMENT

ತಮಿಳು ನಾಡಗೀತೆ ಅರ್ಧಕ್ಕೆ ನಿಲ್ಲಿಸಿದ ಪ್ರಕರಣ: ಅಣ್ಣಾಮಲೈ ವಿರುದ್ಧ ಕನಿಮೋಳಿ ಕಿಡಿ

ತಮಿಳು ನಾಡಗೀತೆಯನ್ನು ಅವಮಾನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕ್ಷಮೆ ಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2023, 8:31 IST
Last Updated 28 ಏಪ್ರಿಲ್ 2023, 8:31 IST
ಕನಿಮೋಳಿ
ಕನಿಮೋಳಿ    

ಚೆನ್ನೈ: ಶಿವಮೊಗ್ಗದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ತಮಿಳು ನಾಡಗೀತೆ ಅರ್ಧಕ್ಕೆ ನಿಲ್ಲಿಸಿದ ಪ್ರಕರಣ ತಮಿಳುನಾಡಿನಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ತಮಿಳು ನಾಡಗೀತೆಯನ್ನು ಅವಮಾನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕ್ಷಮೆ ಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ.

‘ತಮಿಳ್‌ ತಾಯಿ ವಾಝ್ತುವನ್ನು (ತಮಿಳು ನಾಡಗೀತೆ) ತನ್ನದೇ ಪಕ್ಷದ ಸದಸ್ಯರು ಅವಮಾನ ಮಾಡುವುದನ್ನು ತಡೆಯಲಾಗದವರು ತಮಿಳುನಾಡಿನ ಜನರ ಬಗ್ಗೆ ಕಾಳಜಿ ತೆಗೆದುಕೊಳ್ಳುವರೇ? ಎಂದು ಪ್ರಶ್ನೆ ಮಾಡಿದ್ದಾರೆ.

ADVERTISEMENT

ಘಟನೆಯ ಹಿನ್ನಲೆ:

ಶಿವಮೊಗ್ಗದ ಎನ್ ಇಎಸ್ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ತಮಿಳುನಾಡು ನಾಡಗೀತೆಯನ್ನು ಅರ್ಧಕ್ಕೆ ತಡೆದ ಶಾಸಕ ಕೆ.ಎಸ್.ಈಶ್ವರಪ್ಪ ಕರ್ನಾಟಕದ ನಾಡಗೀತೆ ಹಾಕಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಹ ಉಸ್ತುವಾರಿಯೂ ಆದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರೊಂದಿಗೆ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ (ಚನ್ನಿ) ಕೂಡ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶ ಆರಂಭವಾಗುತ್ತಿದ್ದಂತೆಯೇ ಸಂಘಟಕರು ಈಗ ತಮಿಳು ನಾಡಗೀತೆ ಆರಂಭವಾಗಲಿದೆ. ಎಲ್ಲರೂ ಎದ್ದು ನಿಂತುಕೊಳ್ಳಿ ಎಂದು ಮನವಿ ಮಾಡಿದರು. ಆಗ ಸಮಾವೇಶದಲ್ಲಿ ನೆರೆದವರ ಜೊತೆ ವೇದಿಕೆಯಲ್ಲಿದ್ದ ಈಶ್ವರಪ್ಪ ಸೇರಿದಂತೆ ಗಣ್ಯರು ಎದ್ದು ನಿಂತರು.

ಧ್ವನಿವರ್ಧಕದಲ್ಲಿ ತಮಿಳುನಾಡು ನಾಡಗೀತೆ ಆರಂಭವಾಗುತ್ತಿದ್ದಂತೆಯೇ ಆಸನದ ಬಳಿಯಿಂದ ಡಯಾಸ್ ನತ್ತ ಬಂದ ಈಶ್ವರಪ್ಪ, ನಾಡಗೀತೆ ನಿಲ್ಲಿಸುವಂತೆ ಸಂಘಟಕರಿಗೆ ಸೂಚಿಸಿದರು. ಕರ್ನಾಟಕದ ನಾಡಗೀತೆ ಹಾಕಿಸಿದರು. ನಂತರ ವೇದಿಕೆಯಲ್ಲಿದ್ದ ಗಣ್ಯರು ಕನ್ನಡದ ನಾಡಗೀತೆಗೆ ಗೌರವ ಸಲ್ಲಿಸಿದರು.

ಕ್ಯಾಸೆಟ್ ನಲ್ಲಿ ತಮಿಳು ನಾಡಗೀತೆ ಹಾಕುವುದು ಬೇಡ. ಬೇಕಿದ್ದರೆ ಇಲ್ಲಿರುವ ಯಾರಾದರೂ ತಮಿಳು ಹೆಣ್ಣುಮಕ್ಕಳು ಬಂದು ಹಾಡಲಿ ರಂದು ಈಶ್ವರಪ್ಪ ಹೇಳಿದರೂ ಯಾರೂ ಮುಂದೆ ಬರಲಿಲ್ಲ. ನಂತರ ಕ್ಯಾಸೆಟ್ ಮೂಲಕ ಕನ್ನಡ ನಾಡಗೀತೆ ಬಿತ್ತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.