ADVERTISEMENT

ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗೆ ತೀರ್ಪಿನಲ್ಲಿ ಜಾಗವಿಲ್ಲ: ಡಿಎಂಕೆ

ಸನಾತನ ಧರ್ಮ ಕುರಿತ ಹೇಳಿಕೆ ವಿವಾದ

ಪಿಟಿಐ
Published 22 ಜನವರಿ 2026, 14:20 IST
Last Updated 22 ಜನವರಿ 2026, 14:20 IST
-
-   

ಚೆನ್ನೈ: ‘ಸನಾತನ ಧರ್ಮ’ ಕುರಿತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಸಂಬಂಧಿಸಿ ಮದ್ರಾಸ್‌ ಹೈಕೋರ್ಟ್‌ ನೀಡಿರುವ ಆದೇಶ ತಪ್ಪು’ ಎಂದು ಆಡಳಿತಾರೂಢ ಪಕ್ಷ ಡಿಎಂಕೆ ಗುರುವಾರ ಹೇಳಿದೆ.

ಅಲ್ಲದೆ,‘ಹೈಕೋರ್ಟ್‌ ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗೆ ತೀರ್ಪಿನಲ್ಲಿ ಅವಕಾಶ ಇಲ್ಲ’ ಎಂದು ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ಹೇಳಿದ್ದಾರೆ.

‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಕಾರ್ಯಕ್ರಮವೊಂದರಲ್ಲಿ ಉದಯನಿಧಿ ಸ್ಟಾಲಿನ್‌ ಕರೆನೀಡಿದ್ದರು. ಈ ಹೇಳಿಕೆ ಖಂಡಿಸಿ ಬಿಜೆಪಿ ನಾಯಕ ಅಮಿತ್‌ ಮಾಳವೀಯ ಪೋಸ್ಟ್‌ ಮಾಡಿದ್ದರು. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಾಳವೀಯ ಹೈಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠ, ಮಾಳವೀಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು ಮಾಡಿ ಆದೇಶಿಸಿತ್ತು. ಉದಯನಿಧಿ ಅವರ ಹೇಳಿಕೆ ‘ದ್ವೇಷ ಭಾಷಣ’ಕ್ಕೆ ಸಮ ಎಂದೂ ಹೇಳಿತ್ತು.

ಮದುರೆ ಪೀಠದ ಈ ಆದೇಶ ಕುರಿತು ಪ್ರತಿಕ್ರಿಯಿಸಿರುವ ಶರವಣನ್‌,‘ಈ ತೀರ್ಪು ತಪ್ಪು’ ಎಂದು ಹೇಳಿದರು.

‘ಮತ್ತೊಂದು ಬದಿಯವರ ವಾದ ಆಲಿಸದೇ ತೀರ್ಪು ನೀಡಬಾರದು ಎಂಬುದು ನ್ಯಾಯಶಾಸ್ತ್ರದ ತತ್ವ. ಮದುರೆ ಪೀಠದ ಆದೇಶ ಈ ತತ್ವಕ್ಕೆ ಅನುಗುಣವಾಗಿಲ್ಲ’ ಎಂದರು.

‘ಮದುರೆ ಪೀಠದ ಆದೇಶವು ಡಿಎಂಕೆ ಪಕ್ಷದ ಸಂಕುಚಿತ ಹಾಗೂ ಹಿಂದೂ ವಿರೋಧಿ ಮನಸ್ಥಿತಿಯನ್ನು ಬಲವಾಗಿ ಖಂಡಿಸಿದೆ’ ಎಂಬುದಾಗಿ ಕೇಂದ್ರ ಸಚಿವ ಪೀಯೂಷ್‌ ಗೋಯೆಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶರವಣನ್,‘ಪಕ್ಷವು ಹಿಂದೂ ವಿರೋಧಿಯಲ್ಲ’ ಎಂದರು.