ADVERTISEMENT

ದಾಖಲೆ, ಸಂವಹನಕ್ಕೆ ಹಿಂದಿ ಬಳಸಿ ಎಂದ ಜೆಐಪಿಎಂಇಆರ್‌ ವಿರುದ್ಧ ಡಿಎಂಕೆ ಆಕ್ರೋಶ

ಪಿಟಿಐ
Published 9 ಮೇ 2022, 7:55 IST
Last Updated 9 ಮೇ 2022, 7:55 IST
ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್‌)
ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್‌)   

ಪುದುಚೇರಿ: ದಾಖಲೆಗಳಲ್ಲಿ ಮತ್ತು ಸಂವಹನಕ್ಕೆ ಹಿಂದಿಯನ್ನು ಬಳಸಬೇಕೆಂದು ಸೂಚಿಸಿ ಇತ್ತೀಚೆಗೆ ‘ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್‌)’ ಹೊರಡಿಸಿದ್ದ ಸುತ್ತೋಲೆಯನ್ನು ಪುದುಚೇರಿಯ ಡಿಎಂಕೆ ಶಾಸಕರು ಮತ್ತು ಮುಖಂಡರು ವಿರೋಧಿಸಿದ್ದಾರೆ.

ಸುತ್ತೋಲೆ ವಿರುದ್ಧ ಜೆಐಪಿಎಂಇಆರ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಪುದುಚೇರಿ ಘಟಕದ ಸಂಚಾಲಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಶಿವ ಮತ್ತು ಪಕ್ಷದ ಇತರ ಕೆಲ ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.

ದಾಖಲೆಗಳು, ಸಂವಹನಗಳಲ್ಲಿ ಹಿಂದಿಯನ್ನು ಬಳಸಬೇಕೆಂದು ಸಂಸ್ಥೆ ಹೊರಡಿಸಿದ ಸುತ್ತೋಲೆಯನ್ನು ಖಂಡಿಸುವ ಘೋಷಣೆಗಳನ್ನು ಡಿಎಂಕೆ ಮುಖಂಡರು ಮತ್ತು ಕೆಲವು ಸ್ಥಳೀಯ ಯುವಕರು ಪ್ರತಿಭಟನೆ ವೇಳೆ ಕೂಗಿದರು.

ADVERTISEMENT

‘ಜೆಐಪಿಎಂಇಆರ್‌ ಈಗಾಗಲೇ ಸ್ಥಳೀಯ ಯುವಕರಿಗೆ ಉದ್ಯೋಗ ನಿರಾಕರಿಸಿದೆ. ಈಗ ಹೊರಡಿಸಲಾಗಿರುವ ಹಿಂದಿ ಭಾಷೆ ಬಳಕೆಯ ಸುತ್ತೋಲೆಯು ಸ್ಥಳೀಯರಿಗೆ ಮತ್ತೊಂದು ಹೊಡೆತ ನೀಡಿದೆ’ ಎಂದು ಶಿವ ಆರೋಪಿಸಿದರು.

‘ಈ ಸುತ್ತೋಲೆಯನ್ನು ಬೇಷರತ್ತಾಗಿ ಹಿಂಪಡೆಯಬೇಕು’ ಎಂದು ಶಿವ ಇದೇ ವೇಳೆ ಆಗ್ರಹಿಸಿದರು.

ಪ್ರತಿಭಟನಾ ನಿರತ ಡಿಎಂಕೆ ಶಾಸಕರಾದ ಎಲ್ ಸಂಪತ್, ಅನ್ನಿಬಲ್ ಕೆನಡಿ ಮತ್ತು ಸೆಂದಿಲ್ ಕುಮಾರ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ, ‘ತಮಿಳಿಗ ವಜ್ವುರಿಮೈ ಕಚ್ಚಿ’ ನಾಯಕ ಮತ್ತು ತಮಿಳುನಾಡು ವಿಧಾನಸಭೆಯ ಸದಸ್ಯ ಟಿ. ವೇಲ್ಮುರುಗನ್ ಕೂಡ ಈ ಕ್ರಮವನ್ನು ವಿರೋಧಿಸಿದ್ದಾರೆ. ‘ಇದು ಹಿಂದಿಯ ನಿರ್ಲಜ್ಜ ಹೇರಿಕೆ’ ಎಂದು ಅವರು ಕರೆದಿದ್ದಾರೆ. ಅಲ್ಲದೇ, ಕೂಡಲೇ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

‘ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸ್ವಾಯತ್ತ ಸಂಸ್ಥೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.