ADVERTISEMENT

ಪಠ್ಯಕ್ರಮದಲ್ಲಿ ಸಾವರ್ಕರ್‌, ಗೋಲ್ವಾಲ್ಕರ್‌ ಪುಸ್ತಕ: ಶಶಿ ತರೂರ್‌ ಬೆಂಬಲ

ಕಣ್ಣೂರು ವಿ.ವಿ. ನಿರ್ಧಾರಕ್ಕೆ ಸಮರ್ಥನೆ: ಓದದೇ ವಿರೋಧಿಸುವುದು ಸರಿಯಾದ ನಿಲುವು ಅಲ್ಲ ಎಂದ ಕಾಂಗ್ರೆಸ್‌ ಮುಖಂಡ

ಪಿಟಿಐ
Published 12 ಸೆಪ್ಟೆಂಬರ್ 2021, 16:33 IST
Last Updated 12 ಸೆಪ್ಟೆಂಬರ್ 2021, 16:33 IST
   

ತಿರುವನಂತಪುರ: ಸ್ನಾತಕೋತ್ತರ ಪದವಿಯ ‘ಆಡಳಿತ ಮತ್ತು ರಾಜಕೀಯ’ ಕೋರ್ಸ್‌ನಲ್ಲಿ ಆರ್‌ಎಸ್‌ಎಸ್‌ ನಾಯಕ ಎಂ.ಎಸ್‌. ಗೋಲ್ವಾಲ್ಕರ್‌ ಮತ್ತು ಹಿಂದೂ ಮಹಾಸಭಾ ನಾಯಕ ವಿ.ಡಿ. ಸಾವರ್ಕರ್‌ ಅವರ ಪುಸ್ತಕಗಳನ್ನು ಸೇರಿಸುವ ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಪಕ್ಷ ರಾಜಕೀಯ ಬಲಿ ನೀಡಲು ಬೌದ್ಧಿಕ ಸ್ವಾತಂತ್ರ್ಯ ತ್ಯಾಗ ಮಾಡಬಾರದು’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಂಸದ ಶಶಿ ತರೂರ್‌ ಅವರು, ‘ನಮ್ಮ ಸಮಾಜದಲ್ಲಿ ಬೌದ್ಧಿಕ ಸ್ವಾತಂತ್ರ್ಯ ಅತ್ಯಂತ ಮಹತ್ವ ಪಡೆದಿದೆ. ಯಾವುದೇ ವ್ಯಕ್ತಿಯ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳದೇ ಅವರನ್ನು ಸೋಲಿಸುತ್ತೇವೆ ಎನ್ನುವುದು ಮೂರ್ಖತನದ ನಂಬಿಕೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸಾವರ್ಕರ್‌ ಮತ್ತು ಗೋಲ್ವಾಲ್ಕರ್‌ ಅವರ ಹೇಳಿಕೆಗಳನ್ನು ನನ್ನ ಪುಸ್ತಕಗಳಲ್ಲಿಯೂ ಬರೆದಿದ್ದೇನೆ ಮತ್ತು ಅವುಗಳನ್ನು ತಿರಸ್ಕರಿಸಿದ್ದೇನೆ. ಕೆಲವು ಸ್ನೇಹಿತರು ನನ್ನ ನಿಲುವು ಒಪ್ಪಿಕೊಂಡಿಲ್ಲ. ನಾವು ಒಪ್ಪದೇ ಇರುವ ವಿಷಯಗಳು ಸೇರಿದಂತೆ ಪ್ರತಿಯೊಂದು ಅಂಶಗಳನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಹಾಗೂ ಚರ್ಚಿಸಲು ಶೈಕ್ಷಣಿಕ ಸ್ವಾತಂತ್ರ್ಯವು ಅವಕಾಶ ಕಲ್ಪಿಸುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಸಾವರ್ಕರ್‌ ಮತ್ತು ಗೋಲ್ವಾಲ್ಕರ್‌ ಅವರನ್ನು ಓದದೇ ಇದ್ದರೆ ಯಾವ ಅಂಶಗಳ ಆಧಾರದ ಮೇಲೆ ನಾವು ಅವರನ್ನು ವಿರೋಧಿಸಬೇಕು? ಕಣ್ಣೂರು ವಿಶ್ವವಿದ್ಯಾಲಯವು ಗಾಂಧಿ ಮತ್ತು ಟ್ಯಾಗೋರ್‌ ಅವರ ವಿಷಯಗಳ ಬಗ್ಗೆಯೂ ಬೋಧಿಸುತ್ತದೆ’ ಎಂದು ಅವರು ವಿವರಿಸಿದ್ದಾರೆ.

ವಿಶ್ವವಿದ್ಯಾಲಯದ ನಿರ್ಧಾರಕ್ಕೆ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ‘ಇದು ವಿಶ್ವವಿದ್ಯಾಲಯದ ಕೇಸರೀಕರಣ’ ಎಂದು ಟೀಕಿಸಿವೆ.

ಸಾವರ್ಕರ್ ಅವರ ‘ಹಿಂದುತ್ವ: ಹೂ ಇಸ್‌ ಹಿಂದೂ’? ಹಾಗೂ ಗೋಲ್ವಾಲ್ಕರ್ ಅವರ ‘ಬಂಚ್ ಆಫ್‌ ಥಾಟ್ಸ್‌’ ಕೃತಿಗಳನ್ನು ಎಂ.ಎ. ತರಗತಿಯ ಮೂರನೇ ಸೆಮಿಸ್ಟರ್‌ನ ‘ಆಡಳಿತ ಮತ್ತು ರಾಜಕೀಯ’ ವಿಷಯದಲ್ಲಿ ಸೇರಿಸಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳಿವೆ.

ಸಮಿತಿ ನೇಮಕ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ‘ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿದ ನಾಯಕರು ಮತ್ತು ಅವರ ಸಿದ್ಧಾಂತಗಳನ್ನು ನಮ್ಮ ಸರ್ಕಾರ ವೈಭವೀಕರಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಪಠ್ಯಕ್ರಮದ ಬಗ್ಗೆ ಇಬ್ಬರು ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.