ADVERTISEMENT

ರಾಜಧರ್ಮ ಉಪದೇಶಿಸಬೇಡಿ :ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌

ಕಾಂಗ್ರೆಸ್‌ ನಾಯಕಿ ಸೋನಿಯಾಗೆ ಬಿಜೆಪಿ ತಿರುಗೇಟು

ಪಿಟಿಐ
Published 28 ಫೆಬ್ರುವರಿ 2020, 19:25 IST
Last Updated 28 ಫೆಬ್ರುವರಿ 2020, 19:25 IST
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್   

ನವದೆಹಲಿ : ‘ಸೋನಿಯಾ ಗಾಂಧಿಯವರೇ ಕಾಂಗ್ರೆಸ್‌ ಕ್ರಮಿಸಿದ ದಾರಿಯತ್ತ ಒಮ್ಮೆ ತಿರುಗಿ ನೋಡಿ. ಅದು ಕ್ರಮಿಸಿದ ದಾರಿಯೇ ಸರಿಯಾಗಿಲ್ಲ. ಹೀಗಾಗಿ ನೀವು ನಮಗೆ ರಾಜಧರ್ಮದ ಬಗ್ಗೆ ಪಾಠ ಮಾಡಬೇಡಿ’ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಪಿಆರ್‌ ಅನ್ನು ಆರಂಭಿಸಿದ್ದೇ ಕಾಂಗ್ರೆಸ್‌. ಅವರು ಮಾಡಿದ್ದಾದರೆ ಅದು ಸರಿ. ಅದನ್ನೇ ನಾವು ಜಾರಿಗೆ ತಂದಾಗ ಅದರ ವಿರುದ್ಧ ಜನರನ್ನು ಪ್ರಚೋದಿಸುತ್ತಾರೆ. ಕಾಂಗ್ರೆಸ್‌ನ ಈ ನಿಲುವ ಅದ್ಯಾವ ರಾಜಧರ್ಮ’ ಎಂದು ಪ್ರಶ್ನಿಸಿದರು.

ಹಿಂಸಾಚಾರದಿಂದಾಗಿ ಸಂಭವಿಸಿದ ಸಾವು–ನೋವಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ನಿಯೋಗ ಗುರುವಾರ ಮನವಿ ಸಲ್ಲಿಸಿತ್ತು.

ADVERTISEMENT

ಅಲ್ಲದೇ, ರಾಜಧರ್ಮ ಪಾಲಿಸುವಂತೆ ಕೇಂದ್ರಕ್ಕೆ ಸೂಚಿಸಬೇಕು, ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುವ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆ ಪಡೆಯಬೇಕು ಎಂದು ಸೋನಿಯಾ ಒತ್ತಾಯಿಸಿದ್ದರು.

‘ದ್ವೇಷ ಭಾಷಣದ ಮೂಲಕ ಹಿಂಸೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು’ ಎಂದು ಕಾಂಗ್ರೆಸ್ಸೇತರ ವಿರೋಧಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿವೆ.

ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯ ಅಧ್ಯಯನ ನಡೆಸಿ, ವರದಿ ಸಲ್ಲಿಸುವ ಸಲುವಾಗಿ ಐವರು ಸದಸ್ಯರನ್ನು ಒಳಗೊಂಡ ತಂಡವೊಂದನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಿಯೋಜಿಸಿದ್ದಾರೆ.

ಸೌಹಾರ್ದ ಮೆರೆದ ಜನತೆ: ಕೋಮು ದಳ್ಳುರಿಗೆ ತತ್ತರಿಸಿರುವ ಈಶಾನ್ಯ ದೆಹಲಿಯ ನಿವಾಸಿಗಳ ಪೈಕಿ ಕೆಲವು ಹಿಂದೂ, ಮುಸ್ಲಿಂ ಹಾಗೂ ಸಿಖ್‌ ಸಮುದಾಯದವರು ಮನಸು ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೋಮುಗಳ ನಡುವೆ ದ್ವೇಷ ಬಿತ್ತಲು ಯತ್ನಿಸುವ, ಅಂಗಡಿ, ಮನೆ ಹಾಗೂ ವಾಹನಗಳನ್ನು ಧ್ವಂಸಗೊಳಿಸಲು ಯತ್ನಿಸುವವರ ವಿರುದ್ಧ ಟೊಂಕ ಕಟ್ಟಿ ನಿಲ್ಲುವ ಮೂಲಕ, ಸೌಹಾರ್ದ–ಒಗ್ಗಟ್ಟಿಗೆ ಮಾದರಿಯಾಗಿದ್ದಾರೆ.

ಸಂತ್ರಸ್ತರ ನೆರವಿಗೆ 9 ಆಶ್ರಯತಾಣ: ಕೇಜ್ರಿವಾಲ್‌

‘ಗಲಭೆ ಸಂತ್ರಸ್ತರಿಗೆ ಆಹಾರ ಒದಗಿಸುವ ಸಲುವಾಗಿ ಈಶಾನ್ಯ ದೆಹಲಿಯ ವಿವಿಧೆಡೆ ಒಟ್ಟು 9 ಆಶ್ರಯತಾಣಗಳನ್ನು ಸ್ಥಾಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

‘ಹಿಂಸಾಚಾರ ಸಂದರ್ಭದಲ್ಲಿ ಕೆಲವರ ಮನೆಗಳು ಬೆಂಕಿಗಾಹುತಿಯಾಗಿವೆ. ಅಂಥ ಸಂತ್ರಸ್ತರಿಗೆ ನಗದುರೂಪದಲ್ಲಿ ₹ 25,000 ವಿತರಣೆ ಮಾಡಲಾಗುತ್ತಿದೆ’ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂತ್ರಸ್ತರ ನೆರವಿಗಾಗಿ ಒಟ್ಟು 22 ಮ್ಯಾಜಿಸ್ಟ್ರೇಟ್‌ರನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ನಾಲ್ವರು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವರು’ ಎಂದೂ ಅವರು ತಿಳಿಸಿದ್ದಾರೆ.

ಶ್ರೀವಾಸ್ತವಗೆ ಹೆಚ್ಚುವರಿ ಹೊಣೆ

ದೆಹಲಿಯ ವಿಶೇಷ ಪೊಲೀಸ್‌ ಕಮಿಷನರ್‌ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ನೇಮಕಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ಎಸ್‌.ಎನ್‌.ಶ್ರೀವಾಸ್ತವ ಅವರಿಗೆ ದೆಹಲಿ ಪೊಲೀಸ್‌ ಕಮಿಷನರ್‌ ಆಗಿಯೂ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಶ್ರೀವಾಸ್ತವ ಅವರು ಶನಿವಾರ (ಫೆ. 29) ಅಧಿಕಾರ ವಹಿಸಿಕೊಳ್ಳುವರು.

ಆಶ್ರಯತಾಣ ಆರಂಭ: ‘ಗಲಭೆ ಸಂತ್ರಸ್ತರಿಗೆ ಆಹಾರ ಒದಗಿಸುವ ಸಲುವಾಗಿ ಈಶಾನ್ಯ ದೆಹಲಿಯ ವಿವಿಧೆಡೆ ಒಟ್ಟು 9 ಆಶ್ರಯತಾಣಗಳನ್ನು ಸ್ಥಾಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

‘ಮನೆ ಕಳೆದುಕೊಂಡವರಿಗೆ ನಗದುರೂಪದಲ್ಲಿ ₹ 25,000 ವಿತರಣೆ ಮಾಡಲಾಗುತ್ತಿದೆ. ಸಂತ್ರಸ್ತರ ನೆರವಿಗಾಗಿ ಒಟ್ಟು 22 ಮ್ಯಾಜಿಸ್ಟ್ರೇಟ್‌ರನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ನಾಲ್ವರು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವರು’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.