ADVERTISEMENT

ಕೃಷಿ ಮಸೂದೆಗಳಿಗೆ ಅಂಕಿತ ಹಾಕಬೇಡಿ: ರಾಷ್ಟ್ರಪತಿಗೆ ಸುಖ್ಬೀರ್ ಸಿಂಗ್ ಬಾದಲ್ ಮನವಿ

ಪಿಟಿಐ
Published 20 ಸೆಪ್ಟೆಂಬರ್ 2020, 15:53 IST
Last Updated 20 ಸೆಪ್ಟೆಂಬರ್ 2020, 15:53 IST
ಸುಖ್ಬೀರ್ ಸಿಂಗ್ ಬಾದಲ್
ಸುಖ್ಬೀರ್ ಸಿಂಗ್ ಬಾದಲ್   

ಚಂಡೀಗಡ: ರಾಜ್ಯಸಭೆಯು ಅಂಗೀಕರಿಸಿದ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿಗಳು ತಮ್ಮ ಅಂಕಿತವನ್ನು ಹಾಕದೆ, ಅವುಗಳ ಮರುಪರಿಶೀಲನೆಗಾಗಿ ಸಂಸತ್ತಿಗೆ ಹಿಂದಿರುಗಿಸುವಂತೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮನವಿ ಮಾಡಿದ್ದಾರೆ.

ಮಸೂದೆಗಳ ಅಂಗೀಕಾರವಾದ ಇಂದು ಪ್ರಜಾಪ್ರಭುತ್ವ ಮತ್ತು ದೇಶದ ಲಕ್ಷಾಂತರ ಜನರಿಗೆ 'ದುಃಖದ ದಿನ' ಎಂದು ಬಾದಲ್ ಹೇಳಿದ್ದಾರೆ.

'ಪ್ರಜಾಪ್ರಭುತ್ವ ಎಂದರೆ ಒಮ್ಮತವೇ ಹೊರತು, ಬಹುಮತದ ದಬ್ಬಾಳಿಕೆ ಅಲ್ಲ' ಎಂದು ಕೃಷಿಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಪೈಕಿ ಎರಡು ಮಸೂದೆಗಳು ಅಂಗೀಕಾರಗೊಂಡ ಕೂಡಲೇ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಸತ್ತು ಅಂಗೀಕರಿಸಿದ ಕೆಲವು ವರ್ಗದ ಮಸೂದೆಗಳಿಗೆ ಅನುಮೋದನೆಯನ್ನು ತಡೆಹಿಡಿಯುವ ಅಧಿಕಾರವನ್ನು ಸಂವಿಧಾನವು ರಾಷ್ಟ್ರಪತಿಗೆ ನೀಡುತ್ತದೆ.

'ದಯವಿಟ್ಟು ಅವರ ಪರವಾಗಿ ಸರ್ಕಾರದೊಂದಿಗೆ ಮಧ್ಯಪ್ರವೇಶಿಸಿ. ಇಲ್ಲದಿದ್ದರೆ ಅವರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಅನ್ನದಾತ (ರೈತರು) ಹಸಿವಿನಿಂದ ಅಥವಾ ರಸ್ತೆಗಳಲ್ಲಿ ಮಲಗಲು ಬಿಡಬೇಡಿ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಪಕ್ಷಗಳ ಕೋಲಾಹಲದ ಮಧ್ಯೆ, ರಾಜ್ಯಸಭೆಯು ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020 ಅನ್ನು ಭಾನುವಾರ ಅಂಗೀಕರಿಸಿದೆ.

ಮೂರು ಮಸೂದೆಗಳನ್ನು ಲೋಕಸಭೆ ಗುರುವಾರ ಅಂಗೀಕರಿಸಿತು. ಆದರೆ ರಾಜ್ಯಸಭೆಯಲ್ಲಿ ಇಂದು ಎರಡು ಮಸೂದೆಗಳು ಅಂಗೀಕಾರಗೊಂಡಿದ್ದು, ಮೂರನೇ ಮಸೂದೆ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.