ADVERTISEMENT

ವಿವಾಹಕ್ಕೂ ಮುನ್ನ ದೈಹಿಕ ಸಂಬಂಧ ಬೆಳೆಸಿದ್ದೇಕೆ?: ಮಹಿಳೆಗೆ ಸುಪ್ರೀಂ ಕೋರ್ಟ್

ಪಿಟಿಐ
Published 16 ಫೆಬ್ರುವರಿ 2026, 16:01 IST
Last Updated 16 ಫೆಬ್ರುವರಿ 2026, 16:01 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಿವಾಹಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಈ ವೇಳೆ ದೈಹಿಕ ಸಂಬಂಧ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್‌ ಭುಯಾನ್‌ ಅವರನ್ನು ಒಳಗೊಂಡ ನ್ಯಾಯಪೀಠವು, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು.

ಮಹಿಳೆ ಪರ ವಕೀಲರು, ‘ಅವರಿಬ್ಬರು (ಆರೋಪಿ ಮತ್ತು ಮಹಿಳೆ) ವೈವಾಹಿಕ ವೆಬ್‌ಸೈಟ್‌ ಮೂಲಕ 2022ರಲ್ಲಿ ಪರಿಚಿತರಾಗಿದ್ದರು. ನಂತರ ಮದುವೆಯಾಗುವುದಾಗಿ ನಂಬಿಸಿ ದೆಹಲಿ ಮತ್ತು ದುಬೈನಲ್ಲಿ ಹಲವು ಬಾರಿ ‌ದೈಹಿಕ ಸಂಬಂಧ ಬೆಳೆಸಲಾಗಿದೆ’ ಎಂದು ಹೇಳಿದರು.

ADVERTISEMENT

ಬಳಿಕ ನ್ಯಾಯಪೀಠವು, ‘ಆರೋಪಿ ಜೊತೆಗೆ ದುಬೈಗೆ ಪ್ರಯಾಣ ಬೆಳೆಸಿ, ದೈಹಿಕ ಸಂಬಂಧ ಬೆಳೆಸಿದ್ದೇಕೆ’ ಎಂದು ಮಹಿಳೆಯನ್ನು ಪ್ರಶ್ನಿಸಿತು.

‘ಇದು ಪರಸ್ಪರ ಒಪ್ಪಿಗೆಯಲ್ಲಿ ನಡೆದ ಸಂಬಂಧವಾಗಿದೆ. ನಾವು ಹಳೆಯ ಕಾಲದವರಾಗಿರಬಹುದು. ಆದರೆ ಮದುವೆಗೂ ಮುಂಚಿತವಾಗಿ ದೈಹಿಕ ಸಂಬಂಧ ಬೆಳೆಸುವ ಮುನ್ನ ಎಚ್ಚರಿಕೆಯಿಂದಿರಬೇಕು. ವಿವಾಹಕ್ಕೂ ಮೊದಲು ಯಾರನ್ನೂ ನಂಬಬಾರದು’ ಎಂದು ಹೇಳಿತು.

ನ್ಯಾಯಮೂರ್ತಿ ನಾಗರತ್ನ ಅವರು, ‘ಅಷ್ಟೊಂದು ಕಟ್ಟುನಿಟ್ಟಿನವರಾಗಿದ್ದರೆ ಆರೋಪಿಯೊಂದಿಗೆ ದುಬೈಗೆ ಪ್ರಯಾಣಿಸಬಾರದಿತ್ತು. ಇದು ಪರಸ್ಪರ ಒಪ್ಪಿಗೆಯಿಂದ ನಡೆದ ಸಂಬಂಧವಾಗಿದೆ ಎಂದೆನಿಸುತ್ತಿದೆ. ಒಪ್ಪಿತ ಸಂಬಂಧವಿದ್ದಾಗ ದೋಷಾರೋಪ ನಿಗದಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಸೂಚಿಸುತ್ತೇವೆ’ ಎಂದು ಹೇಳಿದರು.

ಮಹಿಳೆಗೆ ಪರಿಹಾರ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವಂತೆ ಆರೋಪಿ ಪರ ವಕೀಲರಿಗೆ ತಿಳಿಸಿದರು.

‘ಪ್ರಕರಣ ಇತ್ಯರ್ಥಪಡಿಸುವ ಮಾರ್ಗೋಪಾಯವನ್ನು ಹುಡುಕಿ’ ಎಂದು ಮಹಿಳೆಯ ಪರ ವಕೀಲರಿಗೆ ತಿಳಿಸಿದರು. ನಂತರ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಪ್ರಕರಣ ಏನು?

ಮದುವೆಯಾಗುವುದಾಗಿ ನಂಬಿಸಿ ದುಬೈಗೆ ಕರೆದೊಯ್ದು ದೈಹಿಕ ಸಂಬಂಧ ಬೆಳೆಸಲಾಗಿದೆ ಮತ್ತು ಒಪ್ಪಿಗೆ ಇಲ್ಲದೆ ಇಬ್ಬರೂ ಒಟ್ಟಿಗಿರುವ ದೃಶ್ಯಗಳನ್ನು ವಿಡಿಯೊ ಮಾಡಿಕೊಳ್ಳಲಾಗಿದೆ. ಅನಂತರ ವಿಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆ ದೂರು ದಾಖಲಿಸಿದ್ದರು. ದೆಹಲಿ ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು.  ಆರೋಪಿ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.