ADVERTISEMENT

ಅಸ್ಸಾಂನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಎರಡೆರಡು ಅಡ್ಡಿ!

ಏಜೆನ್ಸೀಸ್
Published 20 ಜುಲೈ 2020, 14:40 IST
Last Updated 20 ಜುಲೈ 2020, 14:40 IST
ಪ್ರವಾಹದ ನಡುವೆಯೇ ದೋಣಿಯಲ್ಲಿ ದ್ವಿಚಕ್ರವಾಹನ ಸಾಗಿಸುತ್ತಿರುವ ಜನ
ಪ್ರವಾಹದ ನಡುವೆಯೇ ದೋಣಿಯಲ್ಲಿ ದ್ವಿಚಕ್ರವಾಹನ ಸಾಗಿಸುತ್ತಿರುವ ಜನ    
""

ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹಕ್ಕೆ ಕನಿಷ್ಠ 84 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ.

ಈ ಮಧ್ಯೆ ಕಾಜಿರಂಗ ಜೈವಿಕ ಉದ್ಯಾನದಲ್ಲಿ ಪ್ರವಾಹಕ್ಕೆಸಿಲುಕಿ ಸಾವಿಗೀಡಾಗಿರುವ 9 ಖಡ್ಗಮೃಗಗಳ ಪತ್ತೆಗೆ ಕಾರ್ಯಾಚರಣೆಯೂ ತೀವ್ರಗೊಂಡಿದೆ.

ಕಾಜಿರಂಗ ಜೈವಿಕ ಉದ್ಯಾನದಲ್ಲಿ ಖಡ್ಗಮೃಗವನ್ನು ನೀರಿನ ಹೊಂಡದಿಂದ ಮೇಲೆತ್ತುತ್ತಿರುವುದು

ಅಸ್ಸಾಂನಲ್ಲಿ ಪರಿಹಾರ ಕಾರ್ಯ ಕೈಗೊಂಡಿರುವ ರಕ್ಷಣಾ ತಂಡಗಳು ಎರಡೆರಡು ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಒಂದೆಡೆ ಪ್ರವಾಹ ಏರುತ್ತಲೇ ಇದೆ. ಇನ್ನೊಂದೆಡೆ, ಕೊರೊನಾ ವೈರಸ್‌ ವ್ಯಾಪಕವಾಗಿರುವ ಮಧ್ಯೆಯೇ ಗ್ರಾಮಸ್ಥರು ಸೂರು ಕಂಡುಕೊಳ್ಳಲು ಬೇರೆ ಪ್ರದೇಶಗಳಿಗೆ ಒಟ್ಟು ಒಟ್ಟಾಗಿ ತೆರಳುತ್ತಿದ್ದಾರೆ. ಇದು ಸಮಸ್ಯಾತ್ಮಕವಾಗಿ ಪರಿಣಮಿಸಿದೆ.

ADVERTISEMENT

‘ನೀರಿನ ಮಟ್ಟ ಏರುತ್ತಿರುವುದರಿಂದ ಜನ ಬೇರೆ ಪ್ರದೇಶಗಳಿಗೆ ಹೋಗಬೇಕು ಎಂಬ ಆದೇಶ ನೀಡಲಾಗಿದೆ. ಹೀಗಾಗಿ ಜನ ಗುಂಪು ಗುಂ‍ಪಾಗಿ ಹೋಗುತ್ತಿದ್ದಾರೆ. ಈಗ ದೈಹಿಕ ಅಂತರ ಕಾಪಾಡುವಂತೆ ಮಾಡುವುದು ಕಷ್ಟ ಸಾಧ್ಯ. ಕನಿಷ್ಠ ಮಾಸ್ಕ್‌ ಧರಿಸುವಂತೆಯು, ಬಟ್ಟೆಯಿಂದ ಬಾಯಿ, ಮೂಗನ್ನು ಮುಚ್ಚಿಕೊಳ್ಳುವಂತೆಯೂ ಜನರಿಗೆ ನಾವು ಸಲಹೆ ನೀಡುತ್ತಿದ್ದೇವೆ ,’ ಎಂದು ಈಶಾನ್ಯ ರಾಜ್ಯಗಳ ಪ್ರವಾಹ ನಿರ್ವಹಣಾ ಪಡೆಯ ಸದಸ್ಯ ಸಂಗಮಿತ್ರ ಸನ್ಯಾಲ್‌ ಹೇಳಿದ್ದಾರೆ.

ಬ್ರಹ್ಮಪುತ್ರ ನದಿಯ ನೀರಿನ ಮಟ್ಟವು 11 ಸೆಂ.ಮೀ (4.3 ಇಂಚು) ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎರಡು ವಾರಗಳಲ್ಲಿ ಪ್ರವಾಹದಿಂದಾಗಿ ನದಿ ಪಾತ್ರ 2,500ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾನಿಯಾಗಿದೆ. ಅಸ್ಸಾಂಗೆ ಖ್ಯಾತಿ ತಂದುಕೊಟ್ಟಿರುವ ಚಹಾ ತೋಟಗಳೂ ಪ್ರತಿಬಾರಿಯಂತೆ ಈ ಬಾರಿಯೂ ಪ್ರವಾಹ, ಮಳೆಯಿಂದಾಗಿ ಹಾನಿಗೊಂಡಿವೆ.

ಒಂಟಿ-ಕೊಂಬಿನ ಖಡ್ಗಮೃಗಗಳ ಅತಿ ದೊಡ್ಡ ನೆಲೆ ಎನಿಸಿಕೊಂಡಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವನ್ನೂ ಪ್ರವಾಹ ಆವರಿಸಿದೆ. ದೇಶದಲ್ಲಿ ಒಂಟಿ ಕೊಂಬಿನ ಖಡ್ಗಮೃಗಗಳ ಸಂಖ್ಯೆ ಒಟ್ಟಾರೆ 3,000 ಇದ್ದು, ಅದರಲ್ಲಿ 2500 ಖಡ್ಗಮೃಗಗಳಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವೇ ನೆಲೆವೀಡಾಗಿದೆ.

ಸದ್ಯ 9 ಖಡ್ಗಮೃಗಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ. ಇದಲ್ಲದೇ 100ಕ್ಕೂ ಅಧಿಕ ವಿವಿಧ ವನ್ಯಜೀವಿಗಳೂ ಪ್ರಾಣ ಕಳೆದುಕೊಂಡಿವೆ ಎಂದು ಕಾಜಿರಂಗ ಕ್ಷೇತ್ರವನ್ನು ಪ್ರತಿನಿಧಿಸುವ, ಅಸ್ಸಾಂನ ಕೃಷಿ ಸಚಿವ ಅತುಲ್‌ ಬೋರಾ ತಿಳಿಸಿದ್ದಾರೆ.

ಕಾಜಿರಂಗ ಜೈವಿಕ ಉದ್ಯಾನದಲ್ಲಿ ಸೊಂಟದ ಮಟ್ಟಕ್ಕೆ ನೀರು ನಿಂತಿರುವುದರಿಂದ ಆನೆ, ಖಡ್ಗಮೃಗ ಸೇರಿದಂತೆ ಹಲವು ಪ್ರಾಣಿಗಳು ಆಶ್ರಯ ಅರಸಿ ಜನ ವಸತಿ ಪ್ರದೇಶಗಳತ್ತ ನುಗ್ಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.