ADVERTISEMENT

'ಲಸಿಕೆ ನಿರಾಕರಿಸಲು ಹಕ್ಕು ಚಲಾವಣೆ ಅನುಮಾನ'–ಮದ್ರಾಸ್ ಹೈಕೋರ್ಟ್

ಪಿಟಿಐ
Published 30 ಜೂನ್ 2021, 16:17 IST
Last Updated 30 ಜೂನ್ 2021, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಹಕ್ಕನ್ನು ಚಲಾಯಿಸಿ ನಾಗರಿಕನು ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಬಹುದೇ? 'ಲಸಿಕೆ ತೆಗೆದುಕೊಳ್ಳಲು ನಿರಾಕರಿಸುವ ಸಂದರ್ಭಗಳಲ್ಲಿ ಹಕ್ಕಿನ ಚಲಾವಣೆ ಮಾಡಬಹುದೇ ಎಂಬುದರ ಕುರಿತು ಅನುಮಾನವಿದೆ' ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರ ನ್ಯಾಯಪೀಠ ಹೇಳಿದೆ.

'ವ್ಯಕ್ತಿಯೊಬ್ಬ ಲಸಿಕೆ ಹಾಕಿಸಿಕೊಳ್ಳುವುದರಿಂದ ತನ್ನ ರಕ್ಷಣೆಯಲ್ಲದೇ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯನ್ನೂ ಹೊಂದಿರಲಿದೆ. ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಯು ಯಾವುದೇ ರೋಗಲಕ್ಷಣಗಳನ್ನು ಬಹಿರಂಗ ಪಡಿಸದಿರುವ ಸಾಧ್ಯತೆಯೂ ಇರುತ್ತದೆ, ಆದರೆ ಆತ ಸೋಂಕಿಗೆ ಒಳಗಾಗಿರಬಹುದಾಗಿರುತ್ತದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ, ಅಂಥ ಸಂದರ್ಭದಲ್ಲಿ ಲಸಿಕೆ ನಿರಾಕರಿಸುವ ಹಕ್ಕು ಚಲಾಯಿಸುವ ಬಗ್ಗೆ ಅನುಮಾನವಿದೆ' ಎಂದು ಪೀಠ ವಿವರಿಸಿದೆ.

ಕೋವಿಡ್ ಲಸಿಕೆ ತೆಗೆದುಕೊಳ್ಳಲು ಕೆಲವು ಭಾಗಗಳಲ್ಲಿ ಹಿಂಜರಿಯಲಾಗುತ್ತಿದೆ ಎಂದು ರಾಜ್ಯದಿಂದ ಸಲ್ಲಿಸಿದ ವರದಿ ಕುರಿತಾಗಿ ನ್ಯಾಯಪೀಠ ಹೇಳಿದೆ.

ADVERTISEMENT

ಲಸಿಕೆಗಳ ಪರಿಣಾಮ ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಲಸಿಕೆಯ ಅನಿವಾರ್ಯತೆಯನ್ನು ತಿಳಿಸಲು ರಾಜ್ಯಗಳು ಜಾಗೃತಿ ಅಭಿಯಾನ ಮತ್ತು ವೈಜ್ಞಾನಿಕ ದತ್ತಾಂಶಗಳೊಂದಿಗೆ ಅಂಥವರ ಮನವೊಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಜೂನ್ 29 ರ ಸ್ಥಿತಿ ವರದಿಯು ಪುನರ್ವಸತಿ ಮನೆಗಳು, ಮಾನಸಿಕ ಆರೈಕೆ ಕೇಂದ್ರಗಳು ಮತ್ತು ಮುಂತಾದವುಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಥವಾ ತೆಗೆದುಕೊಳ್ಳಲು ಯೋಜಿಸಲಾಗಿದೆ ಎಂದು ಸೂಚಿಸುತ್ತದೆಯಾದರೂ, ಅರ್ಜಿದಾರರಾದ ವಕೀಲ ಕಾರ್ಪಗಮ್ ಅವರ ಮನವಿಯಂತೆ ಗಮನಿಸಿದಾಗ, ಸ್ವದೇಶಕ್ಕೆ ಬರುವ ಮತ್ತು ಪ್ರಯಾಣಿಸುವ ಸಾಮರ್ಥ್ಯ ಅಥವಾ ಸಂಪನ್ಮೂಲಗಳನ್ನು ಹೊಂದಿರದ, ವಿಶೇಷವಾಗಿ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಂಗವಿಕಲರಿಗಾಗಿ ಒಂದು ಯೋಜನೆ ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದಾಗ್ಯೂ, ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಲೆಕ್ಕಿಸದೇ ಅಂಗವೈಕಲ್ಯ ಹೊಂದಿರುವ ಎಲ್ಲ ವ್ಯಕ್ತಿಗಳ ಆರೋಗ್ಯ ಕ್ಷೇಮವನ್ನು ರಾಜ್ಯವು ಸಮರ್ಪಕವಾಗಿ ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯ ಆಶಿಸಿದೆ.

ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.