ADVERTISEMENT

ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಡಿಪಿಆರ್‌

ಯೋಜನೆಗೆ ₹5,396 ಕೋಟಿ ವೆಚ್ಚ

ಮಂಜುನಾಥ್ ಹೆಬ್ಬಾರ್‌
Published 15 ಆಗಸ್ಟ್ 2022, 21:32 IST
Last Updated 15 ಆಗಸ್ಟ್ 2022, 21:32 IST
   

ನವದೆಹಲಿ: ಕರ್ನಾಟಕದ ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದೆ. ಈ ನದಿಗಳ ಪುನರುಜ್ಜೀವನಕ್ಕೆ ₹5,396 ಕೋಟಿ ವೆಚ್ಚ ಮಾಡಲಾಗುತ್ತದೆ.

ಭಾರತೀಯ ಅರಣ್ಯ, ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯು (ಐಸಿಎಫ್‌ಆರ್‌ಇ) ದೇಶದ 13 ನದಿಗಳ ಪುನರುಜ್ಜೀವನಕ್ಕಾಗಿಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಡಿಪಿಆರ್ ಸಿದ್ಧಪಡಿಸಿ ಕೊಟ್ಟಿದೆ. ಈ ನದಿಗಳು18,90,110 ಚದರ ಕಿ.ಮೀ. ಜಲಾನಯನ ಪ್ರದೇಶವನ್ನು ಒಳಗೊಂಡಿವೆ.

ನದಿಗಳ ಜಲಾನಯನಪ್ರದೇಶಗಳಲ್ಲಿ ಅರಣ್ಯೀಕರಣ, ಕೊಳಚೆ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಈ ನದಿಗಳ ಪುನರುಜ್ಜೀವನಕ್ಕೆಮುಂದಿನ ಐದು ವರ್ಷಗಳಲ್ಲಿ ₹19,342 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಅರಣ್ಯೀಕರಣ, ಪರಿಸರ– ಅಭಿವೃದ್ಧಿ ಮಂಡಳಿಯ ಅನುದಾನದ ನೆರವಿನಿಂದಈ ಯೋಜನೆ ಅನುಷ್ಠಾನಗೊಂಡ ಬಳಿಕ ದೇಶದಲ್ಲಿ ಅರಣ್ಯ ಪ್ರದೇಶವು 7,417 ಚದರ ಕಿ.ಮೀ. ಹೆಚ್ಚಾಗಲಿದೆ ಎಂದು ಇಲಾಖೆಯು ಅಂದಾಜಿಸಿದೆ.

ADVERTISEMENT

ಕೃಷ್ಣಾ ಹಾಗೂ ಕಾವೇರಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವುದು, ಹಸಿರು ಹೊದಿಕೆಯನ್ನು ಹೆಚ್ಚಿಸುವುದು, ಮಣ್ಣಿನ ಸವಕಳಿ ಹಾಗೂ ಪ್ರವಾಹವನ್ನು ತಡೆಗಟ್ಟುವುದು, ಮರುಪೂರಣದ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡುವುದು ಈ ಯೋಜನೆಯಲ್ಲಿ ಸೇರಿದೆ. ಮರದ ಜಾತಿ, ಔಷಧೀಯ ಸಸ್ಯಗಳು, ಹುಲ್ಲು ನಾಟಿ, ಪೊದೆ, ಹಣ್ಣಿನ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಬಹು ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಢಾನಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅರಣ್ಯ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಡಿಪಿಆರ್‌ ಕಳುಹಿಸಿ ಯೋಜನೆಗೆ ಸಹಭಾಗಿತ್ವ ವಹಿಸುವಂತೆ ಕೇಳಿಕೊಂಡಿದೆ.

ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅನುದಾನಗಳನ್ನು ಬಳಸಿಕೊಂಡು ಈ ನದಿಗಳ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಳ್ಳಲಿವೆ ಎಂದು ಕೇಂದ್ರ ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.