ADVERTISEMENT

ಹರಿಯಾಣ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ವಿವಿಧ ಕೇಶವಿನ್ಯಾಸ, ಮೇಕಪ್‌ಗೆ ನಿಷೇಧ

ಆರೋಗ್ಯ ವಲಯಕ್ಕೆ ವೃತ್ತಿಪರತೆಯ ಸ್ಪರ್ಶ ನೀಡಲು ಮುಂದಾದ ಹರಿಯಾಣ ಸರ್ಕಾರ 

ಪಿಟಿಐ
Published 11 ಫೆಬ್ರುವರಿ 2023, 11:31 IST
Last Updated 11 ಫೆಬ್ರುವರಿ 2023, 11:31 IST
ಅನಿಲ್‌ ವಿಜ್‌
ಅನಿಲ್‌ ವಿಜ್‌   

ಚಂಡೀಗಢ: ಆರೋಗ್ಯ ಇಲಾಖೆಗೆ ವೃತ್ತಿಪರತೆಯ ಸ್ಪರ್ಶ ನೀಡಲು ಮುಂದಾಗಿರುವ ಹರಿಯಾಣ ಸರ್ಕಾರವು ಸರ್ಕಾರಿ ಆಸ್ಪತ್ರೆ ಹಾಗೂ ‌ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಏಕರೂಪದ ವಸ್ತ್ರ ಸಂಹಿತೆ ಜಾರಿಗೊಳಿಸಲು ಮುಂದಾಗಿದೆ.

ಬಗೆ ಬಗೆಯ ಕೇಶವಿನ್ಯಾಸ, ಮೇಕಪ್‌, ಉದ್ದನೆಯ ಉಗುರು ಬಿಡುವುದನ್ನು ನಿಷೇಧಿಸಲಾಗಿದೆ. ಟೀಶರ್ಟ್, ಡೆನಿಮ್‌ ಉಡುಪು ಹಾಗೂ ಸ್ಕರ್ಟ್ಸ್‌ ತೊಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

‘ಆರೋಗ್ಯ ಕೇಂದ್ರಗಳ ಸಿಬ್ಬಂದಿಯು ಕರ್ತವ್ಯದ ಅವಧಿಯಲ್ಲಿ ಮೈತುಂಬಾ ಆಭರಣಗಳನ್ನು ಧರಿಸಿರಬಾರದು. ಮೇಕಪ್‌ ಮಾಡಿಕೊಂಡು ಬರಬಾರದು. ಉದ್ದನೆಯ ಉಗುರನ್ನೂ ಬಿಟ್ಟಿರಬಾರದು. ಇನ್ನು ಮುಂದೆ ಉದ್ದನೆಯ ಕೂದಲು ಬಿಡುವುದು ಅಥವಾ ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದೂ ನಿಷಿದ್ಧ. ಬಣ್ಣ ಬಣ್ಣದ ಜೀನ್ಸ್‌ಗಳು, ಡೆನಿಮ್‌ ಸ್ಕರ್ಟ್‌ಗಳು ಹಾಗೂ ಡೆನಿಮ್‌ ಬಟ್ಟೆಗಳನ್ನೂ ವೃತ್ತಿಪರ ಉಡುಗೆಗಳೆಂದು ಪರಿಗಣಿಸಲಾಗದು. ಹೀಗಾಗಿ ಸಿಬ್ಬಂದಿ ಇವುಗಳನ್ನೂ ಧರಿಸುವಂತಿಲ್ಲ’ ಎಂದು ಆರೋಗ್ಯ ಸಚಿವ ಅನಿಲ್‌ ವಿಜ್‌ ಅವರು ಶುಕ್ರವಾರ ಹೇಳಿದ್ದಾರೆ.

ADVERTISEMENT

‘ಸ್ವೆಟ್‌ಶರ್ಟ್‌ಗಳು, ಸ್ವೆಟ್‌ಸೂಟ್‌ಗಳು, ಶಾರ್ಟ್ಸ್‌ ಧರಿಸುವುದನ್ನೂ ನಿಷೇಧಿಸಲಾಗಿದೆ. ಸ್ಲಾಕ್ಸ್‌, ಸ್ಕರ್ಟ್ಸ್‌, ಪಲಾಜೊಸ್‌, ಟೀಶರ್ಟ್‌, ಸ್ಟ್ರೆಚ್‌ ಟೀಶರ್ಟ್‌, ಸ್ಟ್ರೆಚ್‌ ಪ್ಯಾಂಟ್‌, ಫಿಟಿಂಗ್‌ ಪ್ಯಾಂಟ್‌, ಲೆದರ್‌ ಪ್ಯಾಂಟ್‌, ಸ್ವೆಟ್‌ ಪ್ಯಾಂಟ್‌ ಹೀಗೆ ಭಿನ್ನ ಬಗೆಯ ಧಿರಿಸುಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ಚಪ್ಪಲಿಯು ಕಪ್ಪು ವರ್ಣದ್ದಾಗಿರಬೇಕು. ಹಿತಕರವಾಗಿರಬೇಕು. ವಿಚಿತ್ರ ವಿನ್ಯಾಸಗಳಿಂದ ಕೂಡಿರಬಾರದು’ ಎಂದು ಸೂಚಿಸಿದ್ದಾರೆ.

‘ಶಿಸ್ತು, ಏಕರೂಪತೆ ಹಾಗೂ ಸಿಬ್ಬಂದಿಗಳಲ್ಲಿ ಸಮಾನತೆಯ ಭಾವನೆ ಮೂಡಿಸುವ ಸಲುವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗುತ್ತಿದೆ. ಸಿಬ್ಬಂದಿ ಹಾಗೂ ಸಂಸ್ಥೆಯ ಕುರಿತು ನಾಗರಿಕರಲ್ಲಿ ಗೌರವ ಭಾವನೆ ಮೂಡಿಸುವುದಕ್ಕೂ ಇದು ಸಹಕಾರಿಯಾಗಲಿದೆ. ಪುರುಷರ ತಲೆ ಕೂದಲು ತೀರಾ ಉದ್ದವಾಗಿರಬಾರದು. ಅದರಿಂದ ರೋಗಿಯ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು. ಸ್ವಚ್ಛತೆ, ನೈರ್ಮಲ್ಯ, ಸಾರಿಗೆ, ಭದ್ರತೆ, ಅಡುಗೆ ಹಾಗೂ ಇತರೆ ವಿಭಾಗಗಳ ಸಿಬ್ಬಂದಿಯೂ ಕೆಲಸದ ಅವಧಿಯಲ್ಲಿ ಸಮವಸ್ತ್ರ ಧರಿಸಬೇಕು. ತರಬೇತಿ ನಿರತ ಸಿಬ್ಬಂದಿ ಕಪ್ಪು ಪ್ಯಾಂಟ್‌ ಹಾಗೂ ಬಿಳಿ ಬಣ್ಣದ ಅಂಗಿ ಧರಿಸಿರಬೇಕು. ಜೊತೆಗೆ ‘ನೇಮ್‌ ಟ್ಯಾಗ್‌’ ಹಾಕಿಕೊಂಡಿರಬೇಕು’ ಎಂದೂ ಹೇಳಿದ್ದಾರೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರೂ ಒಂದೇ ಬಗೆಯ ಧಿರಿಸು ಉಟ್ಟಿರುತ್ತಾರೆ. ಸಮವಸ್ತ್ರ ಇಲ್ಲದೆಯೇ ಯಾರೊಬ್ಬರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಿಬ್ಬಂದಿ ನಡುವೆ ವ್ಯತ್ಯಾಸವೇ ಇರುವುದಿಲ್ಲ. ಎಲ್ಲರೂ ಬಣ್ಣ ಬಣ್ಣದ ಬಟ್ಟೆ ತೊಟ್ಟಿರುವುದರಿಂದ, ಬಗೆ ಬಗೆಯ ಕೇಶ ವಿನ್ಯಾಸ ಮಾಡಿಸಿಕೊಂಡಿರುವುದರಿಂದ ಸಿಬ್ಬಂದಿ ಯಾರು? ರೋಗಿ ಯಾರು? ಎಂದು ಗುರುತಿಸುವುದೇ ಕಷ್ಟವಾಗುವಂತಹ ಪರಿಸ್ಥಿತಿ ಇರುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.