
ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಡ್ರೋನ್ ಟ್ಯಾಕ್ಸಿ ಸೇವೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಡ್ರೋನ್ ಮತ್ತು ಬಾಹ್ಯಾಕಾಶ ನಗರ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು, ‘ರಾಜ್ಯವು ಡ್ರೋನ್ ವಲಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಡ್ರೋನ್ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲಾಗುವುದು. ಇದಕ್ಕಾಗಿ ಡ್ರೋನ್ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.
ಹೇಗಿರಲಿದೆ ಡ್ರೋನ್ ಸಿಟಿ?
ಡ್ರೋನ್ ನಗರವು ಕರ್ನೂಲ್ ಜಿಲ್ಲೆಯ ಓರ್ವಕಲ್‌ನ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಡ್ರೋನ್ ವಿನ್ಯಾಸ, ತಯಾರಿಕೆ ಮತ್ತು ಸೇವೆಯ ಅಂತರರಾಷ್ಟ್ರೀಯ ಹಬ್ ಆಗಿ ಅಭಿವೃದ್ಧಿಗೊಳ್ಳಲಿದೆ. ಯೋಜನೆಯು ಅತ್ಯಾಧುನಿಕ ಉತ್ಪಾದನಾ ಪಾರ್ಕ್‌ಗಳು, ಪರೀಕ್ಷೆ ಮತ್ತು ಪ್ರಮಾಣಪತ್ರ ಕೇಂದ್ರಗಳನ್ನು ಒಳಗೊಂಡಿರಲಿದೆ. ಇದಕ್ಕಾಗಿ 25,000 ರಿಮೋಟ್ ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಡ್ರೋನ್ ಸಿಟಿಯು 40,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಬಹುದೆಂಬ ಅಂದಾಜಿದೆ.
ಬಾಹ್ಯಾಕಾಶ ನಗರ ಹೇಗಿರಲಿದೆ?
ಶ್ರೀ ಸತ್ಯ ಸಾಯಿ ಮತ್ತು ತಿರುಪತಿ ಜಿಲ್ಲೆಗಳಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅವಳಿ ಬಾಹ್ಯಾಕಾಶ ನಗರಗಳನ್ನು ಸ್ಥಾಪಿಸಲಾಗುವುದು. ಈ ನಗರಗಳು 10 ವರ್ಷಗಳ ಒಳಗಾಗಿ 25,000 ಕೋಟಿ ಬಂಡವಾಳವನ್ನು ಆಕರ್ಷಿಸಲಿವೆ ಮತ್ತು 35,000 ಉದ್ಯೋಗ ನಿರ್ಮಾಣ ಮಾಡಲಿವೆ ಎಂದು ಅಂದಾಜಿಸಲಾಗಿದೆ. ಯೋಜನೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಗಳ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.