ADVERTISEMENT

ರಾಷ್ಟ್ರಪತಿ ಚುನಾವಣೆ: ಮೋದಿ ಭೇಟಿಯಾದ ದ್ರೌಪದಿ ಮುರ್ಮು, ನಾಳೆ ನಾಮಪತ್ರ ಸಲ್ಲಿಕೆ

ಪಿಟಿಐ
Published 23 ಜೂನ್ 2022, 10:34 IST
Last Updated 23 ಜೂನ್ 2022, 10:34 IST
ರಾಷ್ಟ್ರಪತಿ ಸ್ಥಾನದ ಎನ್‌ಡಿಎ ಅಭ್ಯರ್ಥಿ ದ್ರೌಪತಿ ಮುರ್ಮು ಅವರು ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ
ರಾಷ್ಟ್ರಪತಿ ಸ್ಥಾನದ ಎನ್‌ಡಿಎ ಅಭ್ಯರ್ಥಿ ದ್ರೌಪತಿ ಮುರ್ಮು ಅವರು ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರಪತಿ ಸ್ಥಾನದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗುರುವಾರ ಒಡಿಶಾದ ಭುವನೇಶ್ವರದಿಂದ ರಾಜಧಾನಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದರು.

‘ಮುರ್ಮು ಅವರ ಆಯ್ಕೆಗೆ ಸಮಾಜದ ಎಲ್ಲ ಸ್ತರಗಳಿಂದ, ದೇಶದಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಕೆಳಹಂತದ ಸಮಸ್ಯೆಗಳ ಬಗ್ಗೆ ಅವರಿಗೆ ಇರುವ ಅರಿವು, ದೇಶದ ಪ್ರಗತಿ ಕುರಿತು ಅವರ ದೂರದೃಷ್ಟಿ ಶ್ಲಾಘನಾರ್ಹ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಮುಖಂಡರ ಉಪಸ್ಥಿತಿಯಲ್ಲಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸದಲ್ಲಿ ನಾಮಪತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಧಾನಿ ಮೋದಿ, ಹಿರಿಯ ಸಚಿವರಾದ ರಾಜನಾಥ ಸಿಂಗ್, ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರು ಮುರ್ಮು ಅವರ ಹೆಸರು ಪ್ರಸ್ತಾಪಿಸಲಿದ್ದಾರೆ.

ADVERTISEMENT

ಉಳಿದಂತೆ ಮುರ್ಮು ಹೆಸರು ಅನುಮೋದಿಸಲಿರುವ ಕೇಂದ್ರದ ಸಚಿವರುಗಳು, ಹಿರಿಯ ಬಿಜೆಪಿ ನಾಯಕರು ಹಾಗೂ ಇವರಿಗೆ ಬೆಂಬಲ ಘೋಷಿಸಿರುವ ಬಿಜೆಡಿಯ ಸಸ್ಮಿತ್ ಪಾತ್ರಾ ಸೇರಿದಂತೆ ಹಲವು ಮುಖಂಡರು ಜೋಶಿ ಅವರ ನಿವಾಸದಲ್ಲಿ ಸೇರಿದ್ದರು.

ದೆಹಲಿಗೆ ತೆರಳುವ ಮುನ್ನ ನೀಡಿದ ಹೇಳಿಕೆಯಲ್ಲಿ ಮುರ್ಮು ಅವರು, ‘ಎಲ್ಲರಿಗೂ ಕೃತಜ್ಞತೆಗಳು. ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲರಿಂದಲೂ ಸಹಕಾರ ಕೋರುತ್ತೇನೆ. ಚುನಾವಣೆಗೆ ಮುನ್ನ ಮತದಾರರನ್ನು ಭೇಟಿಯಾಗಿ ಬೆಂಬಲ ಕೋರುತ್ತೇನೆ’ ಎಂದಿದ್ದಾರೆ.

ಆಯ್ಕೆಯಾದಲ್ಲಿ, ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೇರಿದ ಬುಡಕಟ್ಟು ಸಮಾಜದ ಪ್ರಥಮ ಮಹಿಳೆ ಹಾಗೂ ಈ ಸ್ಥಾನಕ್ಕೇರಿದ ದ್ವಿತೀಯ ಮಹಿಳೆಯಾಗಲಿದ್ದಾರೆ. ವಿರೋಧಪಕ್ಷಗಳು ಸರ್ವಸಮ್ಮತ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.