ADVERTISEMENT

ಲೋಕಸಭೆಯಲ್ಲಿ ಟಿಎಂಸಿ ಸಂಸದ ಇ–ಸಿಗರೇಟ್ ಸೇದುತ್ತಿದ್ದಾರೆ: ಅನುರಾಗ್ ಠಾಕೂರ್ ಆರೋಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:37 IST
Last Updated 12 ಡಿಸೆಂಬರ್ 2025, 5:37 IST
   

ನವದೆಹಲಿ: ಕೆಲವರು ಸಂಸತ್‌ನಲ್ಲಿ ಇ–ಸಿಗರೇಟ್ ಸೇದುತ್ತಾರೆ ಎಂದು ಬಿಜೆಪಿ ಸದಸ್ಯ ಅನುರಾಗ್ ಠಾಕೂರ್ ಅವರು ಗುರುವಾರ ಲೋಕಸಭೆಯಲ್ಲಿ ಹೇಳಿದ್ದು ಕೋಲಾಹಲಕ್ಕೆ ಕಾರಣವಾಯಿತು.

ಯಾವ ಸದಸ್ಯರು ಸೇದುತ್ತಾರೆ ಎಂದು ಹೇಳಿಲ್ಲವಾದರೂ, ತೃಣಮೂಲ ಕಾಂಗ್ರೆಸ್‌ನ ಸದಸ್ಯ ಎಂದಷ್ಟೇ ಹೇಳಿದರು. ‘ಇ–ಸಿಗರೇಟ್ ಅನ್ನು ದೇಶದಾದ್ಯಂತ ನಿಷೇಧಿಸಲಾಗಿದೆ. ಆದರೆ ಸಂಸತ್ತಿನೊಳಗೆ ಅವಕಾಶ ನೀಡಿದ್ದು ಹೇಗೆ? ತೃಣಮೂಲ ಕಾಂಗ್ರೆಸ್ ಸದಸ್ಯರು ಹಲವು ದಿನಗಳಿಂದ ಸೇದುತ್ತಿದ್ದಾರೆ. ಸಂಸತ್ತಿನ ಒಳಗೇ ಸೇದುತ್ತಿದ್ದಾರೆ. ಈ ತಕ್ಷಣವೇ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಅವರು ಇದನ್ನು ಪ್ರಸ್ತಾಪಿಸಿದರು.

ADVERTISEMENT

ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು. ‘ಎಲ್ಲರೂ ಸಂಸದೀಯ ಪರಂಪರೆ ಹಾಗೂ ನಿಯಮಗಳನ್ನು ಪಾಲಿಸಬೇಕು. ಅಂಥಹದ್ದೇನಾದರೂ ನನ್ನ ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ಠಾಕೂರ್ ಅವರು ಇದನ್ನು ಪ್ರಸ್ತಾಪಿಸಿದ ಕೂಡಲೇ, ಟಿಎಂಸಿ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿಯ ಹಲವು ಸದಸ್ಯರು ಸ್ಪೀಕರ್ ಅವರನ್ನು ಆಗ್ರಹಿಸಿದರು. ‘ಶಾಂತವಾಗಿರಿ’ ಎಂದು ಅವರಿಗೆ ಸೂಚಿಸಿದ ಸ್ಪೀಕರ್, ಲಿಖಿತ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ, ‘2019ರಿಂದ ದೇಶದಾದ್ಯಂತ ಇ–ಸಿಗರೇಟ್‌ ನಿಷೇಧಿಸಲಾಗಿದೆ. ಅಂತಹ ಯಾವುದೇ ವಸ್ತುವನ್ನು ಸಂಸತ್ ಆವರಣದಲ್ಲಿ ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಂಸತ್ತಿನೊಳಗೆ ಇ–ಸಿಗರೇಟ್ ತೆಗೆದುಕೊಂಡು ಹೋಗುವುದು ಕಾನೂನು ವಿರುದ್ಧ’ ಎಂದು ಹೇಳಿದ್ದಾರೆ.

ಇ–ಸಿಗರೇಟ್ ಇಟ್ಟುಕೊಳ್ಳುವುದು ಹಾಗೂ ಉಪಯೋಗಿಸುವುದು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ 2019ರಡಿ ಕಾನೂನು ಬಾಹಿರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.