ADVERTISEMENT

ಊಟಿ, ಕೊಡೈಕೆನಾಲ್‌ನಲ್ಲಿ ಇ–ಪಾಸ್ ಜಾರಿ: ಹೊಸ ವ್ಯವಸ್ಥೆಗೆ ವ್ಯಾಪಾರಿಗಳ ವಿರೋಧ

ಅಂಗಡಿ ಮುಂಗಟ್ಟುಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 16:00 IST
Last Updated 2 ಏಪ್ರಿಲ್ 2025, 16:00 IST
<div class="paragraphs"><p>ಊಟಿ</p></div>

ಊಟಿ

   

ಚೆನ್ನೈ: ಪ್ರವಾಸಿ ವಾಹನಗಳ ಸಂಖ್ಯೆ ನಿಯಂತ್ರಿಸುವ ಹೊಸ 'ಇ-ಪಾಸ್' ವ್ಯವಸ್ಥೆಯು ಪ್ರವಾಸಿ ಪಟ್ಟಣಗಳಾದ ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ.

ಪ್ರಾಕೃತಿಕ ಸುಂದರ ತಾಣ ನೀಲಗಿರಿ ಜಿಲ್ಲೆಯೊಳಗೆ ವಾರದ ದಿನಗಳಲ್ಲಿ ಆರು ಸಾವಿರ ವಾಹನಗಳಿಗೆ ಮಾತ್ರ ಪ್ರವೇಶ ಸಿಗಲಿದೆ. ವಾರಾಂತ್ಯದಲ್ಲಿ ಈ ಸಂಖ್ಯೆ ಎಂಟು ಸಾವಿರಕ್ಕೆ ಮಿತಿಗೊಳಿಸಲಾಗಿದೆ.

ADVERTISEMENT

ಹೊಸ ವ್ಯವಸ್ಥೆಯು ಜೂನ್ 30ರವರೆಗೆ ಜಾರಿಯಲ್ಲಿರಲಿದೆ. ಮದ್ರಾಸ್ ಹೈಕೋರ್ಟ್‌ ಆದೇಶದಂತೆ ಜಾರಿಗೆ ತರಲಾದ ಈ ವ್ಯವಸ್ಥೆ ವಿರೋಧಿಸಿ, ನೀಲಗಿರಿ ಜಿಲ್ಲೆಗಳಲ್ಲಿ ವ್ಯಾಪಾರಿಗಳು ಅಂಗಡಿಮುಂಗಟ್ಟುಗಳನ್ನು ಬುಧವಾರ ಮುಚ್ಚಿದ್ದರು. 

ಈ ಎರಡು ಪಟ್ಟಣಗಳು, ಕಳೆದ ಕೆಲವು ವರ್ಷಗಳಲ್ಲಿ, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿದ್ದ ಪ್ರವಾಸಿಗರ ದಟ್ಟಣೆಯಿಂದ ನಲುಗಿದ್ದವು. ಪ್ರವಾಸಿ ತಾಣಗಳ ಪರಿಸರದ ಮೇಲೆ ಇದು ಗಂಭೀರ ಪರಿಣಾಮ ಕೂಡ ಬೀರಿತ್ತು.

ಊಟಿಗೆ 2024ರ ಏಪ್ರಿಲ್‌ನಲ್ಲಿ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿದ್ದು, ವಾರಾಂತ್ಯದಲ್ಲಿ ಸುಮಾರು 20 ಸಾವಿರ ವಾಹನಗಳು ಪ್ರವೇಶಿಸಿದ್ದವು. ಇದರಿಂದಾಗಿ ವಾಹನಗಳ ಸಂಖ್ಯೆಯ ಮೇಲೆ ನಿಗಾ ಇಡಲು ‘ಇ-ಪಾಸ್‘ ವ್ಯವಸ್ಥೆ ಪರಿಚಯಿಸುವಂತೆ ಹೈಕೋರ್ಟ್ ಆದೇಶಿಸಿತ್ತು.

ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಊಟಿಯಲ್ಲಿ ಕಾಣಬರುತ್ತಿವೆ. ಪಟ್ಟಣದಲ್ಲಿ 2024ರ ಜನವರಿಯಲ್ಲಿ ಶೂನ್ಯ ತಾಪಮಾನ ದಾಖಲಾಗಿತ್ತು. ಬೇಸಿಗೆಯಲ್ಲಿ ತಾಪಮಾನವು 29 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇದು 1951ರ ನಂತರದಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವೆನಿಸಿದೆ.

ಕೊಡೈಕೆನಾಲ್ ಮತ್ತು ಊಟಿಯಲ್ಲಿನ ವಾಹನ ಸಂಚಾರ ಸಾಮರ್ಥ್ಯದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಸಂಚಾರ ನಿರ್ವಹಣೆಗೆ ಸೂಕ್ತ ಶಿಫಾರಸು ಮಾಡಲು ರಾಜ್ಯ ಸರ್ಕಾರವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ (ಐಐಟಿ-ಎಂ) ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ನೆರವು ಪಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.