ADVERTISEMENT

ಮಾಲ್ದೀವ್ಸ್‌ಗೆ ಕಾಯ್ದಿರಿಸಿದ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ EaseMyTrip

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2024, 11:01 IST
Last Updated 8 ಜನವರಿ 2024, 11:01 IST
<div class="paragraphs"><p>ಮಾಲ್ಡೀವ್ಸ್‌</p></div>

ಮಾಲ್ಡೀವ್ಸ್‌

   

ಚಿತ್ರ: iStock Photos

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಕುರಿತು ಅವಮಾನಕರ ಹೇಳಿಕೆ ನೀಡಿದ ಮಾಲ್ದೀವ್ಸ್‌ ಸಚಿವರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಹಲವು ಭಾರತೀಯರು ಮಾಲ್ದೀವ್ಸ್‌ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದರೆ, ಟ್ರಾವೆಲ್ ಕಂಪನಿ ‘ಈಸ್‌ ಮೈ ಟ್ರಿಪ್‌’ ಮಾಲ್ದೀವ್ಸ್‌ ಪ್ರವಾಸಕ್ಕಾಗಿ ಕಾಯ್ದಿರಿಸಿದ ಎಲ್ಲ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದೆ.

ADVERTISEMENT

ಈ ಬಗ್ಗೆ ಎಕ್ಸ್‌ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ‘ಈಸ್‌ ಮೈ ಟ್ರಿಪ್‌’ ಕಂಪನಿಯ ಸಿಇಒ ನಿಶಾಂತ್ ಪಿಟ್ಟಿ, ‌‘ಸಂಸ್ಥೆಯ ಲಾಭಕ್ಕಿಂತ ರಾಷ್ಟ್ರದ ಹಿತಾಸಕ್ತಿ ಮುಖ್ಯ’ ಎಂದು ಪ್ರತಿಪಾದಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಲ್ದೀವ್ಸ್‌ ಸಚಿವರ ನಡೆಯು ಖಂಡನೀಯ. ದೇಶದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಮಾಲ್ದೀವ್ಸ್‌ಗಿಂತಲೂ ಭಾರತದ ಲಕ್ಷದ್ವೀಪದ ಕಡಲ ತೀರಗಳು ನಯನ ಮನೋಹರವಾಗಿವೆ. ಮೋದಿ ಅವರು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದರು. ಭಾರತೀಯರು ಈ ಪ್ರಾಚೀನ ನೆಲೆಗೆ ಭೇಟಿ ನೀಡಬೇಕು’ ಎಂದು ಹೇಳಿದ್ದಾರೆ.

‘ಅಯೋಧ್ಯೆ ಮತ್ತು ಲಕ್ಷದ್ವೀಪದ ಸೊಬಗು ಪ್ರವಾಸಿಗರಿಗೆ ಮೋಡಿ ಮಾಡುತ್ತದೆ. ಮಾಲ್ದೀವ್ಸ್‌ನ ಪ್ರವಾಸದ ಬುಕಿಂಗ್‌ ಸ್ಥಗಿತಗೊಳಿಸಿ. ದೇಶದಲ್ಲಿರುವ ಈ ಎರಡು ಅದ್ಭುತ ತಾಣಗಳಿಗೆ ತೆರಳಿ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಶೀಘ್ರವೇ, ಸಂಸ್ಥೆಯಿಂದಲೂ ಈ ತಾಣಗಳ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್‌ ನೀಡಲಾಗುವುದು’ ಎಂದು ಹೇಳಿದ್ದಾರೆ.

ಅವಮಾನಕರ ಮಾತುಗಳನ್ನು ಆಡಿದ್ದ ಉಪಸಚಿವರಾದ (ಡೆಪ್ಯುಟಿ ಮಿನಿಸ್ಟರ್) ಮರಿಯಂ ಶಿವ್ನ, ಅಬ್ದುಲ್ಲಾ ಎಂ. ಮಾಜಿದ್,  ಮಾಲ್ಶಾ ಶರೀಫ್ ಅವರನ್ನು ಮಾಲ್ದೀವ್ಸ್‌ ಸರ್ಕಾರ ಭಾನುವಾರ ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.