ADVERTISEMENT

ಕೋವಿಡ್‌–19 ವಿರುದ್ಧ ಜಯ ಸಾಧಿಸಲು ಈಸ್ಟರ್‌ ಶಕ್ತಿ ನೀಡಲಿ: ಮೋದಿ 

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 6:08 IST
Last Updated 12 ಏಪ್ರಿಲ್ 2020, 6:08 IST
   

ಕೊರೊನಾ ವೈರಸ್ ನಿಯಂತ್ರಣಕ್ಕೆಂದು ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಈಸ್ಟರ್ ಭಾನುವಾರ ಮನೆಗಳಿಗೆ ಸೀಮಿತಗೊಂಡಿದೆ. ಏಸುಕ್ರಿಸ್ತ ಪುನರುತ್ಥಾನದ ಈ ದಿನದಂದು ಪ್ರತಿ ವರ್ಷವೂ ಚರ್ಚ್‌ಗಳಲ್ಲಿ ಶ್ರದ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಧಾರ್ಮಿಕ ವಿಧಿವಿಧಾನಗಳೂ ನೆರವೇರುತ್ತಿದ್ದವು. ಆದರೆ, ಈ ಬಾರಿ ಕೊರೊನಾ ವೈರಸ್‌ ಭೀತಿ ಇದೆಲ್ಲವನ್ನೂ ತಡೆದಿದೆ. ಈಸ್ಟರ್‌ ಕಳೆಗುಂದಿರುವ ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಮೂಲಕ ಎಲ್ಲರಿಗೂ ಶುಭ ಕೋರಿದ್ದಾರೆ.

‘ಈಸ್ಟರ್‌ನ ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ನಾವು ಸ್ಮರಿಸುತ್ತೇವೆ. ವಿಶೇಷವಾಗಿ ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಯನ್ನು ನೆನೆಯುತ್ತೇವೆ. ಕೊರೊನಾ ವೈರಸ್‌ ವಿರುದ್ಧ ಯಶಸ್ವಿಯಾಗಿ ಜಯ ಸಾಧಿಸಲು ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಲು ಈಸ್ಟರ್ ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ,’ ಎಂದು ಅವರು ಟ್ವಿಟರ್‌ ಮೂಲಕ ಆಶಿಸಿದ್ದಾರೆ.

ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ಅವರೂ ಟ್ವೀಟ್‌ ಮಾಡಿ ಈಸ್ಟರ್‌ಗೆ ಶುಭ ಕೋರಿದ್ದಾರೆ. ‘ಈಸ್ಟರ್‌ನ ಶುಭ ಸಂದರ್ಭಕ್ಕೆ ನನ್ನ ಶುಭಾಶಯಗಳು,’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ಯೇಸು ಕ್ರಿಸ್ತ ಗುಡ್ ಫ್ರೈಡೇಯಂದು ಶಿಲುಬೆಗೇರಿದ ನಂತರ ಪುನರುತ್ಥಾನಗೊಂಡ ದಿನವಾದ ಭಾನುವಾರವನ್ನು ಈಸ್ಟರ್ ಆಗಿ ಆಚರಿಸಲಾಗುತ್ತದೆ. ಅಲ್ಲದೆ, 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ, ಪಾಪನಿವೇದನೆಯನ್ನು ಸೂಚಿಸುತ್ತದೆ.

ಆದರೆ, ಈಸ್ಟರ್‌ ಈ ಬಾರಿ ಭಾರತದಲ್ಲಿ ಮಾತ್ರ ಕಳೆಗುಂದಿಲ್ಲ. ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತಿನಲ್ಲೇ ಈ ದಿನ ಸಂತಸ ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.