ADVERTISEMENT

ಗಡಿಯಲ್ಲಿ ‌ಪ್ರಕ್ಷುಬ್ಧ ಸ್ಥಿತಿ ಶಮನಕ್ಕೆ ಶಾಂತಿಯುತ ಚರ್ಚೆಗೆ ಭಾರತ–ಚೀನಾ ಸಮ್ಮತಿ

ಪಿಟಿಐ
Published 7 ಜೂನ್ 2020, 8:01 IST
Last Updated 7 ಜೂನ್ 2020, 8:01 IST
ಗಡಿಯಲ್ಲಿ ಸೇನಾ ಜಮಾವಣೆಯ ಉಪಗ್ರಹ ಚಿತ್ರ
ಗಡಿಯಲ್ಲಿ ಸೇನಾ ಜಮಾವಣೆಯ ಉಪಗ್ರಹ ಚಿತ್ರ    

ನವದೆಹಲಿ: ಗಡಿಯಲ್ಲಿ ಪೂರ್ವ ಲಡಾಖ್ ಬಳಿ ಉದ್ಭವಿಸಿದ್ದ ಪ್ರಕ್ಷುಬ್ಧ ಸ್ಥಿತಿಯನ್ನು ದ್ವಿಪಕ್ಷೀಯ ಒಪ್ಪಂದದಂತೆ ಶಾಂತಿಯುತ ಚರ್ಚೆಯ ಮೂಲಕ ಶಮನಗೊಳಿಸಲು ಭಾರತ ಮತ್ತು ಚೀನಾ ಸೇನೆಗಳು ಸಮ್ಮತಿಸಿವೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ತಿಂಗಳಿಂದ ಗಡಿ ಭಾಗದಲ್ಲಿ ಮೂಡಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಸೇನಾ ಪ್ರಮುಖರ ನಡುವೆ ಶನಿವಾರ ಉನ್ನತ ಮಟ್ಟದ ಮಾತುಕತೆ ನಡೆಯಿತು.

ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆಗೆ ಪೂರಕವಾಗಿ ಆಗಿರುವ ಒಪ್ಪಂದದಂತೆ ಶಾಂತಿಯುತ ಚರ್ಚೆಯ ಮೂಲಕ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಚುಶುಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಚೀನಾದ ವ್ಯಾಪ್ತಿಗೆ ಬರುವ ಮಾಲ್ಡೊದಲ್ಲಿ ಇರುವ ಗಡಿ ಭದ್ರತಾ ಪಡೆಗಳ ಯೋಧರ ಭೇಟಿ ತಾಣದಲ್ಲಿ ಈ ಮಾತುಕತೆ ನಡೆಯಿತು.

ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಒಪ್ಪಂದ ನಡೆದು 70 ವರ್ಷಗಳೇ ಆಗಿವೆ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೈಗೊಳ್ಳಬಹುದಾದ ನಿರ್ಣಯವು ಎರಡೂ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

‘ಅದೇ ಪ್ರಕಾರ, ಎರಡೂ ರಾಷ್ಟ್ರಗಳ ನಡುವೆ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳು ಪ್ರಸ್ತುತ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ನಡೆಯಲಿವೆ. ಇದು, ಗಡಿಯಲ್ಲಿ ಶಾಂತಿ ನೆಲೆಸಲು ಸಹಾಯಕವಾಗಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.