ಚುನಾವಣಾ ಆಯೋಗ
–ಪಿಟಿಐ ಚಿತ್ರ
ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸದ ಮತ್ತು ಕಚೇರಿಗಳನ್ನು ತೆರೆಯಲು ಸಾಧ್ಯವಾಗದ 345 ಪಕ್ಷಗಳನ್ನು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ (ಆರ್‌ಯುಪಿಪಿ) ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗವು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಗುರುತಿಸಲಾಗಿದೆ. ರಾಜಕೀಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಸ್ತುತ 2,800ಕ್ಕೂ ಹೆಚ್ಚು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿವೆ. ಆದರೆ, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಾಗಿ ಮುಂದುವರಿಯಲು ಅಗತ್ಯವಿರುವ ಷರತ್ತುಗಳನ್ನು ಪೂರೈಸುವಲ್ಲಿ ಹಲವು ಪಕ್ಷಗಳು ವಿಫಲವಾಗಿವೆ. ಅಂತಹ ಪಕ್ಷಗಳನ್ನು ಗುರುತಿಸಲು ಚುನಾವಣಾ ಆಯೋಗವು ದೇಶದಾದ್ಯಂತ ಪ್ರಕ್ರಿಯೆ ನಡೆಸಿದ್ದು, ಇಲ್ಲಿಯವರೆಗೆ 345 ಪಕ್ಷಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವುದೇ ಪಕ್ಷವನ್ನು ಅನಗತ್ಯವಾಗಿ ಪಟ್ಟಿಯಿಂದ ತೆಗೆದುಹಾಕದಂತೆ ನೋಡಿಕೊಳ್ಳಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.