ನವದಹೆಲಿ: ಚುನಾವಣಾ ಆಯೋಗವು ಯಾವಾಗಲೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯು ಬಹುಸಂಖ್ಯಾತರ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಉಳಿಯುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿರುವ ಅಸಂವಿಧಾನಿಕ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರತಿಯೊಬ್ಬ ಚುನಾವಣಾ ಆಯುಕ್ತರು ಸರ್ಕಾರದ ಜೊತೆಗಿನ ಹೊಂದಾಣಿಕೆಯಲ್ಲಿ ಹಿಂದಿನವರನ್ನು ಮೀರಿಸಿದ್ದಾರೆ ಎಂದು ಸಿಬಲ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಟೀಕಿಸಿದ ಮಾಜಿ ಕಾನೂನು ಸಚಿವರು, ಚುನಾವಣಾ ಆಯೋಗವು (ಇಸಿ) ಪೌರತ್ವದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
22 ವರ್ಷಗಳ ನಂತರ ನಡೆಯುತ್ತಿರುವ ಪರಿಷ್ಕರಣೆಯು ಅನರ್ಹರನ್ನು ಪಟ್ಟಿಯಿಂದ ಹೊರಹಾಕುತ್ತದೆ. ಕಾನೂನಿನ ಪ್ರಕಾರ ಮತ ಚಲಾಯಿಸಲು ಅರ್ಹರಿಗೆ ಅವಕಾಶ ನೀಡುತ್ತದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಚುನಾವಣಾ ಆಯೋಗ ಸ್ವತಂತ್ರವಾಗಿದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಏಕೆಂದರೆ, ಆಯೋಗವು ತನ್ನ ಸ್ವಾತಂತ್ರ್ಯವನ್ನು ಪ್ರದರ್ಶಿಸುತ್ತಿಲ್ಲ ಎಂದಿದ್ದಾರೆ
ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಬೇರೆಲ್ಲದಕ್ಕಿಂತ ಹೆಚ್ಚಾಗಿ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದ ವಿಚಾರವು ಸಹ ಅತ್ಯಂತ ಪ್ರಮುಖ. ಏಕೆಂದರೆ, ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆಗೆ ಕಾರಣ ಏನೆಂಬುದನ್ನು ಚುನಾವಣಾ ಆಯೋಗ ಈವರೆಗೆ ಬಹಿರಂಗಪಡಿಸಿಲ್ಲ ಎಂದಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಆಧಾರ, ಮತದಾರರ ಚೀಟಿ ಮತ್ತು ರೇಷನ್ ಕಾರ್ಡ್ ಪರಿಗಣಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.