biharನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಸಮರ್ಥಿಸಿಕೊಂಡಿರುವ ಭಾರತೀಯ ಚುನಾವಣಾ ಆಯೋಗ, ಈ ಪ್ರಕ್ರಿಯೆಯು ಮತದಾರರ ಪಟ್ಟಿಯಿಂದ ಅನರ್ಹರನ್ನು ತೆಗೆಯುವ ಮೂಲಕ ಚುನಾವಣಾ ಪರಿಶುದ್ಧತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ದೇಶದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಿರ್ದೇಶಿಸುವ ಜೂನ್ 24ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಆಯೋಗ ಪ್ರಮಾಣಪತ್ರ ಸಲ್ಲಿಸಿದೆ.
‘ಕೆಲ ಕಾನೂನಾತ್ಮಕ ಸಮಸ್ಯೆಗಳ ನಡುವೆಯೂ ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಆಯೋಗವು 2025ರ ಎಸ್‌ಐಆರ್‌ನಲ್ಲಿ ಗುರುತಿನ ಸೀಮಿತ ಉದ್ದೇಶಕ್ಕಾಗಿ ಈಗಾಗಲೇ ಗಣನೆಗೆ ತೆಗೆದುಕೊಳ್ಳುತ್ತಿದೆ’ ಎಂದು ಹೇಳಿದೆ.
‘ಎಸ್‌ಐಆರ್ ಕಾರ್ಯವು ಮತದಾರರ ಪಟ್ಟಿಯಿಂದ ಅನರ್ಹರನ್ನು ತೆಗೆಯುವ ಮೂಲಕ ಚುನಾವಣೆಗಳ ಪರಿಶುದ್ಧತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ– 1950ರ ಸೆಕ್ಷನ್ 16 ಮತ್ತು 19 ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆ–1951ರ ಸೆಕ್ಷನ್ 62 ಹಾಗೂ ಸಂವಿಧಾನದ 326ನೇ ವಿಧಿಯು ಪೌರತ್ವ, ವಯಸ್ಸು ಮತ್ತು ಸಾಮಾನ್ಯ ನಿವಾಸಕ್ಕೆ ಸಂಬಂಧಿಸಿದಂತೆ ಕೆಲ ಅರ್ಹತೆಗಳನ್ನು ನಿಗದಿಪಡಿಸಿವೆ. ಅನರ್ಹ ವ್ಯಕ್ತಿಗಳಿಗೆ ಮತದಾನದ ಹಕ್ಕು ಇರುವುದಿಲ್ಲ. ಅದನ್ನು ಅವರು ಸಂವಿಧಾನದ 19 ಮತ್ತು 21ನೇ ವಿಧಿಗಳ ಉಲ್ಲಂಘನೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ’ ಎಂದು ಆಯೋಗ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದೆ.
ಎಸ್‌ಐಆರ್–2025ರ ಪರಿಷ್ಕರಣೆಯಲ್ಲಿ ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕಳೆದ 17ರಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.