ADVERTISEMENT

ಪೋಸ್ಟರ್‌ನಲ್ಲಿ ವಾಯುಪಡೆಯ ಅಭಿನಂದನ್‌:ಬಿಜೆಪಿ ಶಾಸಕನಿಗೆ ಚುನಾವಣಾ ಆಯೋಗದ ನೋಟಿಸ್‌

ಪಿಟಿಐ
Published 13 ಮಾರ್ಚ್ 2019, 8:05 IST
Last Updated 13 ಮಾರ್ಚ್ 2019, 8:05 IST
   

ನವದೆಹಲಿ: ಪಕ್ಷದ ಪ್ರಚಾರದ ಪೋಸ್ಟರ್‌ನಲ್ಲಿ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್ ಅವರ ಚಿತ್ರವನ್ನು ಬಳಸಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ ಪ್ರಕಟಿಸಿಕೊಂಡಿರುವ ದೆಹಲಿ ಬಿಜೆಪಿ ಶಾಸಕ ಓಂ ಪ್ರಕಾಶ್‌ ಶರ್ಮಾಗೆ ಚುನಾವಣಾ ಆಯೋಗ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಕೂಡಲೇ ಪ್ರಕಟಿಸಿಕೊಂಡಿರುವ ಪೋಸ್ಟ್‌ ತೆಗೆದು ಹಾಕಬೇಕು ಹಾಗೂ ಗುರುವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಏಪ್ರಿಲ್‌ 11ರಿಂದ ಮೇ 19ರ ವರೆಗೂ ಲೋಕಸಭಾ ಚುನಾವಣೆ ನಿಗದಿಯಾಗಿದ್ದು, ದೆಹಲಿಯಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ADVERTISEMENT

ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ವಾಯುಪಡೆ ವಿಂಗ್ ಕಮಾಂಡರ್‌ ಅಭಿನಂದನ್‌ ಹಾಗೂ ದೆಹಲಿಯ ವಿಶ್ವಾಸ್‌ ನಗರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಶರ್ಮಾ ಅವರ ಚಿತ್ರಗಳನ್ನು ಪೋಸ್ಟರ್‌ ಒಳಗೊಂಡಿತ್ತು. ಮಾರ್ಚ್‌ 1ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಪ್ರಕಟಿಸಿಕೊಳ್ಳಲಾಗಿತ್ತು.

’ಪಾಕಿಸ್ತಾನ ತಲೆ ಬಾಗಿತು, ನಮ್ಮ ಕೆಚ್ಚೆದೆಯ ಯೋಧ ಮರಳಿ ಬಂದರು. ಇದು ರಾಜತಾಂತ್ರಿಕತೆಗೆ ಸಂದ ಬಹುದೊಡ್ಡ ಗೆಲುವು, ಅಭಿನಂದನ್‌ ಅವರನ್ನು ಅತಿ ಕಡಿಮೆ ಸಮಯದಲ್ಲಿ ಮೋದಿಜೀ ಕರೆತಂದರು’ ಎಂಬ ಬರಹವನ್ನು ಪೋಸ್ಟರ್‌ ಒಳಗೊಂಡಿತ್ತು.

‘ಅಭಿನಂದನ್‌ ಅವರ ಚಿತ್ರವನ್ನು ಒಳಗೊಂಡ ಪೋಸ್ಟರ್‌ನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿಕೊಂಡಿದ್ದ ಕಾರಣ, ಮಾರ್ಚ್‌ 11ರಂದು ಶರ್ಮಾ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಶಾಹದರಾ ಜಿಲ್ಲಾಧಿಕಾರಿ ಕೆ.ಎಂ.ಮಹೇಶ್‌ ಹೇಳಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಅವರಿಗೆಪ್ರತಿಕ್ರಿಯಿಸಲುಗುರುವಾರ ಬೆಳಿಗ್ಗೆ 11ರ ಗಡುವು ನೀಡಲಾಗಿದೆ ಎಂದು ರಿಟರ್ನಿಂ‌ಗ್ ಆಫೀಸರ್‌ ಸಹ ಆಗಿರುವ ಮಹೇಶ್‌ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಯೋಧರು, ರಕ್ಷಣಾ ಪಡೆಗಳ ಕುರಿತು ಪ್ರಕಟಿಸಿಕೊಳ್ಳುವುದಕ್ಕೆ ಚುನಾವಣಾ ಆಯೋಗ ತಡೆ ನೀಡಿ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.