
ನವದೆಹಲಿ: ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದ ಬಳಿಕ ವಿಜಯೋತ್ಸವ ಆಚರಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಸಂಬಂಧಿಸಿದ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗ ಸೂಚನೆ ನೀಡಿದೆ. ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಆಯ್ಕೆಯಾದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸುತ್ತಿರುವುದನ್ನು ಗಮನಿಸಿ ಆಯೋಗ ಈ ಆದೇಶ ಹೊರಡಿಸಿದೆ.
‘ಆಯೋಗವು ವಿಜಯೋತ್ಸವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ. ಕ್ರಮ ಕೈಗೊಂಡಿರುವ ಬಗ್ಗೆ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಆಯೋಗದ ವಕ್ತಾರರು ತಿಳಿಸಿದ್ದಾರೆ.
ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಕೋವಿಡ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.