ನಾಗ್ಪುರ: ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ರದ್ದು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆಯು ಅಸಮರ್ಪಕವಾಗಿದ್ದು, ನುಣುಚಿಕೊಳ್ಳುವ ಯತ್ನವಾಗಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಶುಕ್ರವಾರ ಆರೋಪಿಸಿದ್ದಾರೆ.
ಪ್ರಕರಣದ ತನಿಖೆ ಮಾಡುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಕೇಳಿರುವ ಎಲ್ಲಾ ಮಾಹಿತಿಗಳನ್ನು ಆಯೋಗ ಒದಗಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
‘2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ವ್ಯವಸ್ಥಿತ ಪಿತೂರಿ ನಡೆದಿತ್ತು. 6,018 ಮತದಾರರ ಹೆಸರು ರದ್ದು ಮಾಡಲು ಸಾಫ್ಟ್‌ವೇರ್ ಮೂಲಕ ನಕಲಿ ಅರ್ಜಿಗಳನ್ನು ಭರ್ತಿ ಮಾಡಲಾಗಿತ್ತು. ಈ ಹಗರಣಕ್ಕೆ ಚುನಾವಣಾ ಆಯೋಗವೇ ಹೊಣೆ’ ಎಂದು ಪತ್ರಕರ್ತರಿಗೆ ಪಾಟೀಲ್ ಪ್ರತಿಕ್ರಿಯಿಸಿದರು.
‘ಆನ್‌ಲೈನ್ ಮೂಲಕ ಯಾವ ಹೆಸರನ್ನೂ ರದ್ದು ಮಾಡಿಲ್ಲ’ ಎಂದು ಆಯೋಗ ಹೇಳಿದೆ. ಆದರೆ 2023ರಲ್ಲೇ ಎಫ್‌ಐಆರ್ ಆಗಿದೆ. ಒಂದೇ ಬಾರಿ ಅಷ್ಟೊಂದು ಅರ್ಜಿಗಳು ಭರ್ತಿಯಾದದ್ದು ಹೇಗೆ? ಎಫ್‌ಐಆರ್ ದಾಖಲಾಗಿತ್ತು ಎಂದು ಆಯೋಗವೇ ಹೇಳಿದೆ. ಆದರೆ ಕಾಂಗ್ರೆಸ್ ಅಕ್ರಮ ಪ್ರಶ್ನಿಸಿದ್ದರಿಂದ ಚುನಾವಣಾ ಅಧಿಕಾರಿ ದೂರು ದಾಖಲಿಸಿದ್ದರು ಎಂದು ಪಾಟೀಲ್ ಹೇಳಿದರು.
‘ಕೇಳಿರುವ ಎಲ್ಲಾ ದತ್ತಾಂಶ ನೀಡಿರುವುದಾಗಿ ಆಯೋಗ ಹೇಳಿದೆ. ಆದರೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಪೂರಕ ಮಾಹಿತಿಗಾಗಿ ಹಲವು ಬಾರಿ ಪತ್ರ ಬರೆದಿರುವುದೇಕೆ? 18 ತಿಂಗಳಲ್ಲಿ ಸಿಐಡಿ 18 ಪತ್ರ ಬರೆದಿದೆ. ಸೆಪ್ಟೆಂಬರ್ 9ರ ಪತ್ರಕ್ಕೂ ಸರಿಯಾದ ಉತ್ತರವಿಲ್ಲ. ಎಸ್‌ಐಟಿಗೂ ಬಯಸಿದ ಮಾಹಿತಿ ನೀಡಿಲ್ಲ.’
‘ನಿರ್ದಿಷ್ಟ ಸ್ಥಳದ ಐಪಿ, ಯಾಂತ್ರಿಕ ಮಾಹಿತಿ ಮತ್ತು ಒಟಿಪಿ ವಿವರ ಕೊಟ್ಟಿಲ್ಲ. ಮಹತ್ವದ ದತ್ತಾಂಶ ನಾಶವಾಗಲು ಅದು ಬಯಸಿದೆಯೇ? ತನಿಖೆಗೆ ಸಹಕರಿಸುವ ಉದ್ದೇಶ ಆಯೋಗಕ್ಕಿಲ್ಲವೇ’ ಎಂದು ಪಾಟೀಲ್ ಪ್ರಶ್ನಿಸಿದರು.
ಪ್ರತಿಭಟನೆ ನಡೆಸುವ ಅಥವಾ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವ ಬಗ್ಗೆ ಪಕ್ಷ ಮತ್ತು ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.