
ಚೆನ್ನೈ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ತಮಿಳುನಾಡಿನಲ್ಲಿ ಮುಂದಿನ ವಾರ ಆರಂಭಗೊಳ್ಳಲಿದೆ’ ಎಂದು ಕೇಂದ್ರ ಚುನಾವಣಾ ಆಯೋಗವು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.
ತಮಿಳುನಾಡು ಸೇರಿದಂತೆ ಸದ್ಯದಲ್ಲೇ ದೇಶದಾದ್ಯಂತ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಬಿಹಾರ ಮಾದರಿಯಲ್ಲಿಯೇ ಎಸ್‌ಐಆರ್ ಪ್ರಕ್ರಿಯೆ ಮುಂದಿನ ವಾರ ಆರಂಭಗೊಳ್ಳಲಿದೆ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ.ಅರುಳ್ ಮುರುಗನ್ ಅವರ ಮುಂದೆ ಆಯೋಗವು ದಾಖಲೆಗಳನ್ನು ಸಲ್ಲಿಸಿದೆ.
ಚೆನ್ನೈನ ಟಿ.ನಗರ ವಿಧಾನಸಭಾ ಕ್ಷೇತ್ರದ 229 ಬೂತ್‌ಗಳಲ್ಲಿ ಸಂಪೂರ್ಣವಾಗಿ, ಪಾರದರ್ಶಕವಾಗಿ ಮರುಪರಿಶೀಲನೆ ನಡೆಸುವಂತೆ ಎಐಎಡಿಎಂಕೆಯ ಮಾಜಿ ಶಾಸಕ ಬಿ.ಸತ್ಯನಾರಾಯಣ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ದೂರನ್ನು ಪರಿಗಣಿಸುವುದಾಗಿಹೈಕೋರ್ಟ್ ಮುಂದೆ ಆಯೋಗವು ತಿಳಿಸಿದೆ.
‘ಡಿಎಂಕೆ ಪಕ್ಷಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ದೃಷ್ಟಿಯಿಂದ ಟಿ.ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಪಕ್ಷದ 13 ಸಾವಿರ ಬೆಂಬಲಿಗರ ಹೆಸರುಗಳನ್ನು 2021ರಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು. ಆದರೆ, ಸತ್ತವರ ಹೆಸರನ್ನು ತೆಗೆದುಹಾಕಿರಲಿಲ್ಲ. 1998ರಲ್ಲಿ ಕ್ಷೇತ್ರದಲ್ಲಿ 2,08,349 ಲಕ್ಷ ಮತದಾರರಿದ್ದು, 2021ರ ವೇಳೆಗೆ 36,656ರಷ್ಟು ಮಾತ್ರ ಏರಿಕೆಯಾಗಿದೆ. ಕ್ಷೇತ್ರದಲ್ಲಿರುವ ಜನಸಂಖ್ಯೆಗೂ ಹಾಗೂ ಮತದಾರರ ನಡುವೆ ದೊಡ್ಡ ಮಟ್ಟದ ಅಂತರವಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಪರಿಷ್ಕರಣೆ ನಡೆಸಬೇಕು’ ಎಂದು ಕೋರಿ ಬಿ.ಸತ್ಯನಾರಾಯಣ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಮನವಿಯನ್ನು ಸ್ವೀಕರಿಸಿದ ಹೈಕೋರ್ಟ್ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.