ADVERTISEMENT

Mann Ki Baat | ಈ ವರ್ಷದ ಮೊದಲ 'ಮನ್ ಕಿ ಬಾತ್' ಭಾಷಣದ ಮುಖ್ಯಾಂಶಗಳು

ಪಿಟಿಐ
Published 19 ಜನವರಿ 2025, 7:43 IST
Last Updated 19 ಜನವರಿ 2025, 7:43 IST
   

ನವದೆಹಲಿ: ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್​ ಕಿ ಬಾತ್​ ರೆಡಿಯೊ ಕಾರ್ಯಕ್ರಮ ಇಂದು (ಭಾನುವಾರ) ಪ್ರಸಾರವಾಗಿದೆ.

ಇಂದು ಪ್ರಸಾರವಾದ 118ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅವರು, ರಾಷ್ಟ್ರೀಯ ಮತದಾರರ ದಿನ, ಮಹಾ ಕುಂಭ ಮೇಳ ಹಾಗೂ ಸ್ಟಾರ್ಟ್ ಅಪ್‌ಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪ್ರಾತಿನಿಧ್ಯದ ಕುರಿತು ಮಾತನಾಡಿದ್ದಾರೆ.

ಈ ಸಂಚಿಕೆಯಲ್ಲಿ ಭಾರತ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿಯನ್ನು ಪ್ರಧಾನಿ ಮೋದಿ ಶ್ರೋತೃಗಳಿಗೆ ಕೇಳಿಸಿದ್ದಾರೆ. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಡಾ. ಬಿ,ಆರ್ ಅಂಬೇಡ್ಕರ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಸೇರಿದಂತೆ ಕೆಲವು ಸದಸ್ಯರ ಆಡಿಯೋ ತುಣುಕುಗಳನ್ನು ಪ್ರಸಾರ ಮಾಡಿದ್ದಾರೆ.

ADVERTISEMENT

ಸಂವಿಧಾನ ರಚನಾ ಸಭೆಯಲ್ಲಿ ಹಲವು ವಿಷಯಗಳ ಮೇಲೆ ಸುದೀರ್ಘ ಚರ್ಚೆಗಳು ನಡೆದವು. ಪ್ರತಿಯೊಬ್ಬರ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಅಂಬೇಡ್ಕರ್ ಕರೆ ನೀಡಿದರೆ, ಮಾನವೀಯ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಬೇಕು ಎಂದು ರಾಜೇಂದ್ರ ಪ್ರಸಾದ್ ಪ್ರತಿಪಾದಿಸಿದರು. ನಮ್ಮ ಸಂವಿಧಾನ ರಚನಾಕಾರರು ಹೆಮ್ಮೆಪಡುವಂತಹ ಭಾರತವನ್ನು ನಿರ್ಮಿಸಲು ನಾವು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಮತದಾರರ ದಿನದ ಬಗ್ಗೆ ಪ್ರಸ್ತಾಪ

ಜನವರಿ 25 ರಾಷ್ಟ್ರೀಯ ಮತದಾರರ ದಿನ. ಈ ದಿನದಂದು ಭಾರತದ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. 1951-52ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಎಂದು ಕೆಲವರಿಗೆ ಅನುಮಾನವಿತ್ತು. ಇದೆಲ್ಲದರ ನಡುವೆಯೂ, ನಮ್ಮ ಪ್ರಜಾಪ್ರಭುತ್ವ ಎಲ್ಲಾ ಆತಂಕಗಳನ್ನು ತಪ್ಪೆಂದು ಸಾಬೀತುಪಡಿಸಿದೆ. ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಹಾಗೂ ಅದನ್ನು ಸಶಕ್ತಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ.

ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಆಯೋಗವನ್ನು ಶ್ಲಾಘಿಸಿದ್ದಾರೆ. ಜನಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ನ್ಯಾಯಯುತ ಮತದಾನ ಪ್ರಕ್ರಿಯೆಗೆ ತನ್ನ ಬದ್ಧತೆಯನ್ನು ತೋರಿಸಿದೆ. ಅಲ್ಲದೇ ಚುನಾವಣಾ ಆಯೋಗವು ಕಾಲಕಾಲಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಆಧುನೀಕರಿಸಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಇನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ರೀತಿಯ ತಾರತಮ್ಯವಿಲ್ಲದೇ ವಿವಿಧ ಜಾತಿಗಳು ಮತ್ತು ಪ್ರದೇಶಗಳ ಜನರು ಒಗ್ಗೂಡಿದ್ದಾರೆ. ಇಲ್ಲಿ ಬಡವ ಶ್ರೀಮಂತ, ಜಾತಿಯ ಭೇದಭಾವವಿಲ್ಲ. ಈ ಬಾರಿ ಬಹಳಷ್ಟು ಯುವಕರು ಇದಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.