ನವದೆಹಲಿ: ತರಬೇತಿ ವೇಳೆ ಅಂಗವೈಕಲ್ಯಕ್ಕೆ ತುತ್ತಾಗಿ ಸೇನಾ ಸಂಸ್ಥೆಗಳಿಂದ ಬಿಡುಗಡೆ ಹೊಂದಿದ ಮಾಜಿ ಯೋಧರಿಗೆ ‘ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆ’ಯಡಿ (ಇಸಿಎಚ್‌ಎಸ್) ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ವರದಿ ಸಲ್ಲಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಅಂಗವೈಕಲ್ಯ ಹೊಂದಿದ ಎಲ್ಲಾ ಮಾಜಿ ಯೋಧರನ್ನು ಆಗಸ್ಟ್ 29ರಿಂದ ಇಸಿಎಚ್‌ಎಸ್‌ನಡಿ ಸೇರಿಸಲಾಗಿದೆ. ಅವರಿಗೆ ಒಂದು ಬಾರಿಯ ಚಂದಾದಾರಿಕೆ ಶುಲ್ಕವನ್ನೂ ಮನ್ನಾ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಸೆ.15ರೊಳಗೆ ನೋಂದಣಿಯನ್ನು ಪೂರ್ಣಗೊಳಿಸುವಂತೆ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಹಿರಿಯ ವಕೀಲರಾದ ರೇಖಾ ಪಾಲಿ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ.
‘ರಕ್ಷಣ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು ಸೇವೆಯಿಂದ ಬಿಡುಗಡೆ ಹೊಂದಿದ ಸೈನಿಕರಿಗೆ ಇಸಿಎಚ್‌ಎಸ್‌ನಡಿ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಿದೆ. ಒಂದು ಬಾರಿಯ ಚಂದಾದಾರಿಕೆ ಶುಲ್ಕವಾದ ₹1.20 ಲಕ್ಷವನ್ನು ವಿಧಿಸದಿದೆಯೇ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರವು ಮುಂದಾಗಿರುವುದು ಶ್ಲಾಘನೀಯ ಕಾರ್ಯ’ ಎಂದು ಪೀಠವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.