ADVERTISEMENT

ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪರ್ಮಾರ್‌ ಬಂಧನ

ಲಂಚ, ಹಣ ಅಕ್ರಮ ವರ್ಗಾವಣೆ ಆರೋಪ  

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 11:09 IST
Last Updated 11 ಆಗಸ್ಟ್ 2023, 11:09 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಪರ್ಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಬಂಧಿಸಿದೆ. 

ಗುರುಗ್ರಾಮದ ಇ.ಡಿ ಕಚೇರಿಯಲ್ಲಿ ಮೊದಲಿಗೆ ಸುಧೀರ್‌ ಪರ್ಮಾರ್‌ ವಿಚಾರಣೆ ನಡೆಯಿತು. ನಂತರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಅನುಮತಿ ಪಡೆದು ‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)’ ಅಡಿಯಲ್ಲಿ ಬಂಧಿಸಲಾಯಿತು. 

ಇದಕ್ಕೂ ಮುನ್ನ ಪರ್ಮಾರ್‌ ಅವರ ಸೋದರಳಿಯ ಅಜಯ್‌ ಪರ್ಮಾರ್‌, ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಬಸಂತ್‌ ಬನ್ಸಾಲ್‌, ಪಂಕಜ್‌ ಬನ್ಸಾಲ್‌, ಲಲಿತ್‌ ಗೋಯಲ್‌ ಎಂಬುವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.   

ADVERTISEMENT

ಪಂಚಕುಲದ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಮತ್ತು ಇ.ಡಿ ವಿಶೇಷ ನ್ಯಾಯಾಧೀಶರಾಗಿ ನಿಯೋಜನೆಗೊಂಡಿದ್ದ ಪರ್ಮಾರ್‌ ಅವರ ವಿರುದ್ಧ ಹರಿಯಾಣದ ಭ್ರಷ್ಟಾಚಾರ ನಿಗ್ರಹ ದಳ ಕಳೆದ ಏಪ್ರಿಲ್‌ನಲ್ಲಿ ಲಂಚದ ಆರೋಪದಡಿ ಎಫ್‌ಐಆರ್‌ ದಾಖಲಿಸಿತ್ತು. ಇದರಲ್ಲಿ  ಸೋದರಳಿಯ ಅಜಯ್‌ ಪರ್ಮಾರ್‌ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿ ರೂಪ್‌ ಕುಮಾರ್‌ ಬನ್ಸಾಲ್‌ ಎಂಬುವರೂ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿನ ಹಣ ಅಕ್ರಮ ವರ್ಗಾವಣೆಯನ್ನು ಇ.ಡಿ ತನಿಖೆ ಮಾಡುತ್ತಿದೆ. 

ರೂಪ್‌ ಕುಮಾರ್‌ ಬನ್ಸಾಲ್‌, ಬಸಂತ್‌ ಕುಮಾರ್‌ ಬನ್ಸಾಲ್‌ ಮತ್ತು ಲಲಿತ್‌ ಗೋಯಲ್‌ ಅವರ ವಿರುದ್ಧದ ಇ.ಡಿ ಮತ್ತು ಸಿಬಿಐ ಪ್ರಕರಣಗಳಲ್ಲಿ ಪರ್ಮಾರ್‌ ಅವರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಜತೆಗೆ, ಲಂಚ ಪಡೆದಿರುವ ಬಗ್ಗೆ ಖಚಿತ ಮಾಹಿತಿ ಇದೆ ಎಂದು ಇ.ಡಿ ಹೇಳಿದೆ.

ಎಸಿಬಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸುಧೀರ್‌ ಪರ್ಮಾರ್‌ ಅವರನ್ನು ಪಂಜಾಬ್‌–ಹರಿಯಾಣ ಹೈಕೋರ್ಟ್‌ ಅಮಾನತು ಮಾಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.