ಮುಂಬೈ: ಜಾರಿ ನಿರ್ದೇಶನಾಲಯವು (ಇ.ಡಿ) ರಾಜಕೀಯ ಸೇಡಿನ ಕಾರಣದಿಂದಾಗಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದೆ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ರಮೇಶ್ ಚೆನ್ನಿತಲ ಆರೋಪಿಸಿದ್ದಾರೆ. ಹಾಗೆಯೇ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಜನರ ಬೆಂಬಲ ಇರುವವರೆಗೆ ಕಾಂಗ್ರೆಸ್ ಪಕ್ಷವನ್ನು ಈ ರೀತಿಯಲ್ಲಿ ಮುಗಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ₹ 988 ಕೋಟಿ ಅಕ್ರಮ ವರ್ಗಾವಣೆ ಸಂಬಂಧ ಸೋನಿಯಾ, ರಾಹುಲ್ ಸೇರಿದಂತೆ ಹಲವರ ವಿರುದ್ಧ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಆರೋಪ ಪಟ್ಟಿ ಸಲ್ಲಿಸಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಪ್ರಿಲ್ 9ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಚೆನ್ನತಲ, 'ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಮಾಡುತ್ತಿರುವ ರಾಜಕೀಯ ಪಿತೂರಿ ಇದು. ಕಾಂಗ್ರೆಸ್ ಅನ್ನು ಈ ರೀತಿ ಮುಗಿಸಲು ಸಾಧ್ಯವಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಜನರ ಬೆಂಬಲವಿದೆ' ಎಂದಿದ್ದಾರೆ.
ಈ ವಿಚಾರವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿರುವ ಅವರು, ದೆಹಲಿಯಲ್ಲಿ ಏಪ್ರಿಲ್ 19ರಂದು ಪಕ್ಷದ ನಾಯಕರ ಸಭೆ ಕರೆಯಲಾಗಿದೆ ಎಂದೂ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕರಾದ ಸತೇಜ್ ಪಾಟಿಲ್, ವಿಜಯ್ ವಡೆಟ್ಟಿವಾರ್, ಭಾಯ್ ಜಗಪತ್, ವಿಶ್ವಜಿತ್ ಕದಮ್ ಸೇರಿದಂತೆ ಹಲವರು ಪಕ್ಷದ ಪ್ರಧಾನ ಕಚೇರಿ ತಿಲಕ್ ಭವನ್‌ನದ ಹೊರಗೆ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.