
ನವದೆಹಲಿ: ಇಂಗ್ಲೆಂಡ್ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಅವರಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಪಟ್ಟಿ ಸಲ್ಲಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಲ್ಲಿನ (ಪಿಎಂಎಲ್‌ಎ) ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.
ಇದು ವಾದ್ರಾ ವಿರುದ್ಧದ ಎರಡನೇ ಹಣ ಅಕ್ರಮ ವರ್ಗಾವಣೆ ಆರೋಪಪಟ್ಟಿಯಾಗಿದೆ. ಜುಲೈನಲ್ಲಿ ಹರಿಯಾಣದ ಶಿಕೋಹಪುರದಲ್ಲಿ ಭೂ ವ್ಯವಹಾರದ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ವಿರುದ್ಧ ಇ.ಡಿ ಆರೋಪಪಟ್ಟಿ ಸಲ್ಲಿಸಿತ್ತು. ಭಂಡಾರಿ ಪ್ರಕರಣದಲ್ಲಿ ವಾದ್ರಾ ಅವರನ್ನು ಈ ಹಿಂದೆ ಇ.ಡಿ ವಿಚಾರಣೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಂಡಾರಿ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿತ್ತು. ಜುಲೈನಲ್ಲಿ ದೆಹಲಿ ನ್ಯಾಯಾಲಯವು ಅವರನ್ನು ‘ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಿತ್ತು.
2016ರಲ್ಲಿ ಆದಾಯ ತೆರಿಗೆ ಇಲಾಖೆಯು ದೆಹಲಿಯಲ್ಲಿ ದಾಳಿ ನಡೆಸಿದ ಕೂಡಲೇ ಭಂಡಾರಿ ಲಂಡನ್‌ಗೆ ಪರಾರಿಯಾಗಿದ್ದರು. 2015ರ ಕಪ್ಪುಹಣ ವಿರೋಧಿ ಕಾನೂನಿನಡಿ ಭಂಡಾರಿ ಮತ್ತು ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪಪಟ್ಟಿ ಸಲ್ಲಿಸಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಇ.ಡಿಯು 2017ರ ಫೆಬ್ರುವರಿಯಲ್ಲಿ ಪಿಎಂಎಲ್‌ಎ ಅಡಿ ಭಂಡಾರಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ಲಂಡನ್‌ನಲ್ಲಿರುವ ಮನೆಯೊಂದರ ವಿಚಾರದಲ್ಲಿ ವಾದ್ರಾ ಜೊತೆ ಭಂಡಾರಿ ಅವರ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ, ಇ.ಡಿಯು ಅವರ ಪ್ರಕರಣದಲ್ಲಿ ಎರಡು ಆರೋಪಪಟ್ಟಿಗಳನ್ನು ಸಲ್ಲಿಸಿದೆ.
‘ಲಂಡನ್‌ನಲ್ಲಿ ಯಾವುದೇ ಆಸ್ತಿಯನ್ನು ನೇರ ಅಥವಾ ಪರೋಕ್ಷವಾಗಿ ಹೊಂದಿಲ್ಲ’ ಎಂದು ವಾದ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.