ADVERTISEMENT

ಬಿಜೆಪಿಯ ಎಟಿಎಂ ಆಗಿರುವ ಇ.ಡಿ: ಶಿವಸೇನಾ ನಾಯಕ ಸಂಜಯ್‌ ರಾವುತ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2022, 13:04 IST
Last Updated 8 ಮಾರ್ಚ್ 2022, 13:04 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌    

ಮುಂಬೈ: 'ಜಾರಿ ನಿರ್ದೇಶನಾಲಯವು (ಇ.ಡಿ) ಬಿಜೆಪಿಯ ಎಟಿಎಂನಂತಾಗಿದೆ. ಅದರಲ್ಲಿನ ಕೆಲ ಅಧಿಕಾರಿಗಳು ಬಿಜೆಪಿ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ' ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಅವರು ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ನಾಯಕ, ಸಚಿವ ಆದಿತ್ಯ ಠಾಕ್ರೆ ಹಾಗೂ ಅನಿಲ್ ಪರಬ್ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇ.ಡಿ ವಿರುದ್ಧ ಹರಿಹಾಯ್ದರು.

‘ಕೇಂದ್ರ ಏಜೆನ್ಸಿಗಳು ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ಆಯ್ದ ಕೆಲವರನ್ನು ಮಾತ್ರವೇ ಏಕೆ ಗುರಿಯಾಗಿಸಿಕೊಂಡಿವೆ? ಅವರಿಗೆ ಬೇರೆ ರಾಜ್ಯಗಳ, ಬೇರೆ ಯಾರು ಕಾಣುವುದಿಲ್ಲವೇ? ಇವೆಲ್ಲವೂ, ಮಹಾರಾಷ್ಟ್ರದ ಸರ್ಕಾರದ ಮೇಲೆ ಒತ್ತಡ ಹೇರುವ ಮತ್ತು ಅಸ್ಥಿರಗೊಳಿಸುವ ತಂತ್ರಗಳಾಗಿವೆ’ ಎಂದು ಅವರು ವಾಗ್ದಾಳಿ ನಡೆಸಿದರು.

ADVERTISEMENT

‘ಮುಂಬೈ ಪೊಲೀಸರು ಇಡಿ ಅಧಿಕಾರಿಗಳ ನಂಟಿರುವ ಕೂಟದ ಸುಲಿಗೆ ಮತ್ತು ದಂಧೆಯ ತನಿಖೆ ನಡೆಸಲಿದ್ದಾರೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ; ಕೆಲವು ಇಡಿ ಅಧಿಕಾರಿಗಳು ಜೈಲಿಗೆ ಹೋಗಲಿದ್ದಾರೆ’ ಎಂದು ಅವರು ಗುಡುಗಿದರು.

‘ಕೆಲವು ಇಡಿ ಅಧಿಕಾರಿಗಳು ಬಿಜೆಪಿ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇ.ಡಿ. ಬಿಜೆಪಿಯ ಎಟಿಎಂ ಆಗಿದೆ. ಅಧಿಕಾರಿಗಳು ಸುಲಿಗೆ ಮಾಡುತ್ತಿರುವ ದಾಖಲೆಗಳನ್ನು ನಾನು ಪ್ರಧಾನಿಗೆ ಕೊಟ್ಟಿದ್ದೇನೆ. ಇ.ಡಿ. ಅಧಿಕಾರಿಗಳ ನಂಟಿನ ಕ್ರಿಮಿನಲ್‌ ಕೂಟವು ಗುತ್ತಿಗೆದಾರರು, ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳನ್ನು ಸುಲಿಗೆ ಮಾಡುತ್ತಿದೆ’ ಎಂದು ರಾವುತ್‌ ಗಂಭೀರ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.