ADVERTISEMENT

ಸಂಜಯ್ ರಾವುತ್‌ಗೆ ಮತ್ತೆ ಇ.ಡಿ ಸಮನ್ಸ್: ಜುಲೈ 1ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಪಿಟಿಐ
Published 28 ಜೂನ್ 2022, 13:36 IST
Last Updated 28 ಜೂನ್ 2022, 13:36 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ಶಿವಸೇನಾ ನಾಯಕ ಸಂಜಯ್ ರಾವುತ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಹೊಸದಾಗಿ ಮಂಗಳವಾರ ಸಮನ್ಸ್ ಜಾರಿಗೊಳಿಸಿದೆ. ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ, ‘ಪತ್ರಾ ಚಾಲ್‌’ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣ ಹಾಗೂ ಇತರ ಕೆಲವು ಪ್ರಕರಣಗಳಲ್ಲಿ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾವುತ್ ಅವರಿಗೆ ಈ ಹಿಂದೆ ಸಮನ್ಸ್ ಜಾರಿಗೊಳಿಸಿದ್ದ ಜಾರಿ ನಿರ್ದೇಶನಾಲಯ ಜೂನ್ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಕಾರ್ಯದೊತ್ತಡದ ಕಾರಣ ನೀಡಿದ್ದ ಅವರು, ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಭೇಟಿಯಾಗಿದ್ದ ರಾವುತ್ ಪರ ವಕೀಲರು 14 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಈ ತಿಂಗಳ ಮಟ್ಟಿಗೆ ಮಾತ್ರ ಅವರಿಗೆ ವಿನಾಯಿತಿ ದೊರೆತಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಶಾಸಕರ ಒಂದು ಗುಂಪು ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡೆದ್ದು, ಗುವಾಹಟಿಯಲ್ಲಿ ತಂಗಿರುವ ಸಂದರ್ಭದಲ್ಲೇ ರಾವುತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.