ಚೆನ್ನೈ: ಸರ್ಕಾರಿ ನೌಕರನಿಂದ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಶುಕ್ರವಾರ ತಿಳಿಸಿದೆ.
ಅಂಕಿತ್ ತಿವಾರಿ ಬಂಧಿತ ಅಧಿಕಾರಿ. ಇವರು ಕೇಂದ್ರ ಸರ್ಕಾರದ ಮಧುರೈ ಇ.ಡಿ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಿವಿಎಸಿಯ ಅಧಿಕೃತ ಮಾಹಿತಿ ಪ್ರಕಾರ, ತಿವಾರಿ ಅವರನ್ನು ದಿಂಡಿಗಲ್‌ನಲ್ಲಿ ವಶಕ್ಕೆ ಪಡೆದ ಡಿವಿಎಸಿ ಅಧಿಕಾರಿಗಳ ತಂಡ ನಂತರ ಮಧುರೈನಲ್ಲಿರುವ ಉಪ ವಲಯ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿತು.
ಪ್ರಕರಣದ ವಿವರ:
ದಿಂಡಿಗಲ್‌ನ ಸರ್ಕಾರಿ ನೌಕರ(ದೂರುದಾರ)ನ ವಿರುದ್ಧ ದಾಖಲಾಗಿರುವ ವಿಜಿಲೆನ್ಸ್ ಪ್ರಕರಣದ ವಿಚಾರವಾಗಿ ಅಕ್ಟೋಬರ್‌ನಲ್ಲಿ ಅಂಕಿತ್ ತಿವಾರಿ ಅವರನ್ನು ಸಂಪರ್ಕಿಸಿದ್ದರು. ಪ್ರಧಾನಿ ಕಚೇರಿಯಿಂದ ವಿಚಾರಣೆ ನಡೆಸಲು ಸೂಚನೆ ಬಂದಿದೆ ಎಂದು ತಿವಾರಿ ನೌಕರನಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಅಕ್ಟೋಬರ್ 30ರಂದು ಮಧುರೈನಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು.
3 ಕೋಟಿ ಹಣಕ್ಕೆ ಬೇಡಿಕೆ:
ನೌಕರ ಮಧುರೈಗೆ ಹೋದಾಗ, ಪ್ರಕರಣದಲ್ಲಿ ಕಾನೂನು ಕ್ರಮವನ್ನು ತಪ್ಪಿಸಲು ₹3 ಕೋಟಿ ಹಣಕ್ಕೆ ತಿವಾರಿ ಬೇಡಿಕೆಯಿಟ್ಟಿದ್ದರು ಎಂದು ಡಿವಿಎಸಿ ಅಧಿಕಾರಿಗಳು ಆರೋಪಿಸಿದ್ದಾರೆ.
ನಂತರ ಮೇಲಾಧಿಕಾರಿಗಳೊಂದಿಗೆ ಮಾತನಾಡಿ 51 ಲಕ್ಷ ಹಣಕ್ಕೆ ಮಾತುಕತೆ ನಡೆದಿತ್ತು. ನವೆಂಬರ್ 1 ರಂದು ಮೊದಲ ಕಂತಾಗಿ ತಿವಾರಿ ಅವರಿಗೆ ₹20 ಲಕ್ಷವನ್ನು ನೌಕರ ನೀಡಿದ್ದಾಗಿ ತಿಳಿಸಿದ್ದಾರೆ.
ಬಳಿಕ 51 ಲಕ್ಷ ಹಣವನ್ನು ಪೂರ್ಣವಾಗಿ ಪಾವತಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಟ್ಸಾಪ್ ಕರೆ ಮತ್ತು ಪಠ್ಯ ಸಂದೇಶಗಳ ಮೂಲಕ ನೌಕರನಿಗೆ ಬೆದರಿಕೆ ಹಾಕಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಅನುಮಾನಗೊಂಡ ಸರ್ಕಾರಿ ನೌಕರ ದಿಂಡಿಗಲ್ ಜಿಲ್ಲಾ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗುರುವಾರ(ನ.30) ದೂರು ನೀಡಿದ್ದಾರೆ. ಶುಕ್ರವಾರ(ಡಿ.1) ಅಂಕಿತ್ ತಿವಾರಿ ದೂರುದಾರರಿಂದ ₹20 ಲಕ್ಷ ಲಂಚ ಪಡೆಯುವಾಗ ಡಿವಿಎಸಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.