
ನವದೆಹಲಿ: ಮನೆ ಖರೀದಿಸಿದ ನೂರಾರು ಗ್ರಾಹಕರಿಗೆ ಮನೆಗಳನ್ನು ಹಸ್ತಾಂತರಿಸದೇ ವಂಚಿಸಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಕಂಪನಿಯೊಂದಕ್ಕೆ ಸೇರಿದ ₹580 ಕೋಟಿಗೂ ಹೆಚ್ಚು ಮೌಲ್ಯದ ನೂರಾರು ಎಕರೆ ಜಮೀನನ್ನು ಹಣ ಅಕ್ರಮ ವರ್ಗಾವಣೆ ತಡೆ(ಪಿಎಂಎಲ್) ಕಾಯ್ಡೆ ಅಡಿ ಮಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ–ಎನ್‌ಸಿಆರ್‌ನ ಎಡಿಇಎಲ್ ಲ್ಯಾಂಡ್‌ಮಾರ್ಕ್ಸ್ ಲಿಮಿಟೆಡ್(ಹಿಂದಿನ ಎರಾ ಲ್ಯಾಂಡ್‌ಮಾರ್ಕ್ ಲಿಮಿಟೆಡ್) ಮತ್ತು ಅದರ ಪ್ರವರ್ತಕರಾದ ಹೇಮ್‌ಸಿಂಗ್ ಭರಾನ ಮತ್ತು ಸುಮಿತ್ ಭರಾನ ವಿರುದ್ಧ ತನಿಖೆ ನಡೆಸಲಾಗಿತ್ತು. ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿರುವ ಕಂಪನಿಯ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಎಂದು ಇ.ಡಿ ಪ್ರಕಟಣೆಯಲ್ಲಿ ಹೇಳಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಕಂಪನಿಗೆ ಸೇರಿದ ಹರಿಯಾಣದ ಗುರುಗ್ರಾಮ, ಫರೀದಾಬಾದ್, ಪಲ್ವಾಲ್ ಮತ್ತು ಬಹದ್ದೂರ್‌ಗಢ ಹಾಗೂ ಉತ್ತರ ಪ್ರದೇಶದ ಮೀರತ್ ಮತ್ತು ಗಾಜಿಯಾಬಾದ್‌ನಲ್ಲಿರುವ 340 ಎಕರೆ ಜಮೀನುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ. ‘ಈ ಜಮೀನುಗಳ ಒಟ್ಟು ಮೌಲ್ಯ ₹585.46 ಕೋಟಿ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಮನೆ ಖರೀದಿಗೆ ಮುಂಗಡ ಹಣ ನೀಡಿ 12ರಿಂದ 19 ವರ್ಷಗಳ ನಂತರವೂ ನೂರಾರು ಗ್ರಾಹಕರಿಗೆ ಮನೆಗಳನ್ನು ಹಸ್ತಾಂತರಿಸದೇ ವಂಚಿಸಿದ ಆರೋಪದ ಮೇಲೆ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಹರಿಯಾಣ ಮತ್ತು ದೆಹಲಿ ಪೊಲೀಸರು 74 ಎಫ್‌ಐಆರ್‌ಗಳನ್ನು ದಾಖಲಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.