ನವದೆಹಲಿ: ನಟ ಮೋಹನಲಾಲ್ ಅಭಿನಯದ ‘ಎಲ್2: ಎಂಪುರಾನ್’ ಚಿತ್ರದ ನಿರ್ಮಾಪಕ, ಕೇರಳದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಚಿಟ್ ಫಂಡ್ ಕಂಪನಿಯ ಕಚೇರಿಗಳಲ್ಲಿ ಶುಕ್ರವಾರದಿಂದ ಶನಿವಾರದವರೆಗೆ ಶೋಧ ಕಾರ್ಯ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ₹ 1.5 ಕೋಟಿ ನಗದನ್ನು ವಶಕ್ಕೆ ಪಡೆದಿದೆ.
ವಿದೇಶಿ ವಿನಿಮಯ ಕಾನೂನಿನ ಉಲ್ಲಂಘನೆ ಆರೋಪದ ಮೇಲೆ ಈ ಶೋಧ ಕೈಗೊಳ್ಳಲಾಗಿತ್ತು ಎಂದು ಇ.ಡಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದ ಕೋಯಿಕ್ಕೋಡ್ ಮತ್ತು ತಮಿಳುನಾಡಿನ ಚೆನ್ನೈನ ಎರಡು ಸ್ಥಳಗಳಲ್ಲಿನ ಶ್ರೀ ಗೋಕುಲಂ ಚಿಟ್ಸ್ ಮತ್ತು ಹಣಕಾಸು ಕಂಪನಿ ಕಚೇರಿಗಳು ಮತ್ತು ಸಂಬಂಧಿಸಿದವರ ವಸತಿಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಎಫ್‌ಇಎಂಎ) ಶೋಧ ನಡೆಸಲಾಯಿತು ಎಂದು ಇ.ಡಿ ಹೇಳಿದೆ.
ಈ ವೇಳೆ ಎಫ್‌ಇಎಂಎ ಉಲ್ಲಂಘನೆಗೆ ಸಂಬಂಧಿಸಿದಂತೆ ಆಪಾದಿತ ದಾಖಲೆಗಳು ಮತ್ತು ₹ 1.50 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅದು ವಿವರಿಸಿದೆ.
ಜಾರಿ ನಿರ್ದೇಶನಾಲಯದ ಆರೋಪಗಳಿಗೆ ಸಂಬಂಧಿಸಿದಂತೆ ಗೋಪಾಲನ್ ಅಥವಾ ಅವರ ಕಂಪನಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
‘ಲೂಸಿಫರ್’ನ ಎರಡನೇ ಭಾಗವಾದ ‘ಎಲ್2: ಎಂಪುರಾನ್’ ಸುತ್ತ ಇತ್ತೀಚೆಗೆ ವಿವಾದ ಬುಗಿಲೆದ್ದಿತ್ತು. ಮಾರ್ಚ್ 27ರಂದು ಬಿಡುಗಡೆಯಾಗಿರುವ ‘ಎಲ್2: ಎಂಪುರಾನ್’, ಮಲಯಾಳಂ ಸಿನಿಮಾ ನಿರ್ಮಾಣಗಳಲ್ಲಿ ಅತ್ಯಂತ ದುಬಾರಿ ಚಿತ್ರಗಳ ಸಾಲಿನಲ್ಲಿ ನಿಂತಿದೆ. ಬಲಪಂಥೀಯ ರಾಜಕಾರಣ ಮತ್ತು ಗುಜರಾತ್ ಗಲಭೆಯ ಉಲ್ಲೇಖದಿಂದಾಗಿ ಈ ಚಿತ್ರ ಇತ್ತೀಚೆಗೆ ಬಾರಿ ಚರ್ಚೆಯ ವಿಷಯವಾಗಿತ್ತು.
ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್) ತೀವ್ರ ಟೀಕೆ ವ್ಯಕ್ತವಾಗಿತ್ತು. ವಿವಾದಗಳ ಬೆನ್ನಲ್ಲೇ ಚಿತ್ರದಲ್ಲಿ ಒಟ್ಟು 2.08 ನಿಮಿಷಗಳಿಗೆ ಕತ್ತರಿ ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.