ಜಾರಿ ನಿರ್ದೇಶನಾಲಯ
ಗುವಹಾಟಿ: ಅಸ್ಸಾಂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನಲ್ಲಿ (SCERT) ನಡೆದಿದೆ ಎನ್ನಲಾದ ₹105 ಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಸೆವಾಲಿ ದೇವಿ ಶರ್ಮಾ ಸಹಿತ ಇತರ ಅಧಿಕಾರಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ SCERT ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷೆ ಹಾಗೂ ನಿರ್ದೇಶಕಿಯೂ ಆಗಿರುವ ಶರ್ಮಾ ಅವರಿಗೆ ಸೇರಿದ ಎಂಟು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದರು ಎಂದು ಮೂಲಗಳು ಹೇಳಿವೆ.
ಅಸ್ಸಾಂ ಮುಖ್ಯಮಂತ್ರಿ ಅವರ ವಿಶೇಷ ವಿಚಕ್ಷಣ ದಳದ ನಿರ್ದೇಶನದಂತೆ ರಾಜ್ಯ ಪೊಲೀಸರು 2023ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.
1992ರ ತಂಡದ ರಾಜಸ್ಥಾನ ಕೇಡರ್ ಅಧಿಕಾರಿಯಾಗಿರುವ ಶರ್ಮಾ ಅವರು ಆದಾಯಕ್ಕಿಂತ ಹೆಚ್ಚಿನ ₹5.7 ಕೋಟಿ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದರು. ರಾಜಸ್ಥಾನ ಪೊಲೀಸರು ಶರ್ಮಾ ಅವರನ್ನು ಬಂಧಿಸಿದ್ದರು. ಇವರು 2017ರಿಂದ 2020ರವರೆಗೆ SCERT ನಿರ್ದೇಶಕಿಯಾಗಿದ್ದರು.
ಈ ಯೋಜನೆಯಡಿ 59 ಸಂಸ್ಥೆಗಳ 27 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ. ಆದರೆ, ಅಕ್ರಮವಾಗಿ 347 ಕೇಂದ್ರಗಳನ್ನು ಶರ್ಮಾ ತೆರೆದಿದ್ದರು. ಇದರಲ್ಲಿ 1.06 ಲಕ್ಷ ಶಿಬಿರಾರ್ಥಿಗಳನ್ನು ದಾಖಲಿಸಿಕೊಂಡು ಅಕ್ರಮವಾಗಿ ಶುಲ್ಕ ಸಂಗ್ರಹಿಸಿದ್ದರು ಎಂಬ ಆರೋಪ ಇವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.