
ನವದೆಹಲಿ: ಚಂಡೀಗಢದ ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸಿಎಲ್) ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ಪಂಜಾಬ್‌ನ ಜಲಂಧರ್‌ನಲ್ಲಿ ₹3,436.56 ಕೋಟಿ ಮೌಲ್ಯದ 169 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಪಿಎಸಿಎಲ್ ಸಾಮೂಹಿಕ ಹೂಡಿಕೆ ಯೋಜನೆಗಳ ಮೂಲಕ ವಂಚನೆ ಎಸಗಿದೆ. ಕಂಪನಿ ಮತ್ತು ಅದರ ಸಹವರ್ತಿಗಳು ದೇಶದಾದ್ಯಂತ ಹೂಡಿಕೆದಾರರಿಂದ ಸುಮಾರು ₹48 ಸಾವಿರ ಕೋಟಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಣದ ಒಂದು ಭಾಗವನ್ನು 169 ಸ್ವತ್ತುಗಳ ಖರೀದಿಗೆ ಬಳಸಲಾಗಿದೆ ಎಂದು ಇ.ಡಿ ಗುರುವಾರ ತಿಳಿಸಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಒಟ್ಟು ಚರ ಮತ್ತು ಸ್ಥಿರಾಸ್ತಿಗಳ ಮೌಲ್ಯ ಸುಮಾರು ₹5,602 ಕೋಟಿಗಳಾಗಿದೆ. ಇದರಲ್ಲಿ ದೇಶ ಮತ್ತು ವಿದೇಶದಲ್ಲಿರುವ ಆಸ್ತಿಗಳು ಸೇರಿವೆ. ಇದುವರೆಗೆ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದೆ.
ಪಿಎಸಿಎಲ್‌ನ ಪ್ರವರ್ತಕ ದಿವಂಗತ ನಿರ್ಮಲ್ ಸಿಂಗ್ ಭಂಗೂ ಮತ್ತು ಇತರರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ. ಭಂಗೂ ಕಳೆದ ವರ್ಷ ಆಗಸ್ಟ್‌ನಲ್ಲಿ ನಿಧನರಾದರು.