ಮುಂಬೈ: ಅಶ್ಲೀಲ ಚಿತ್ರಗಳ ಹಂಚಿಕೆ ಪ್ರಕರಣದ ಜೊತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ಜಾರಿ ಮಾಡಿದೆ.
ಡಿ.2ರಂದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ರಾಜ್ ಕುಂದ್ರಾಗೆ ಸೂಚಿಸಲಾಗಿದೆ. ಒಂದು ವೇಳೆ ಸೋಮವಾರ ಬರಲು ಸಾಧ್ಯವಾಗದಿದ್ದಲ್ಲಿ ಈ ವಾರದಲ್ಲಿ ಇನ್ನೊಂದು ದಿನ ಬರಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಕುಶಿನಗರದ ಉದ್ಯಮಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವರಿಗೆ ಸಮನ್ಸ್ ನೀಡಲಾಗಿದೆ.
ರಾಜ್ ಕುಂದ್ರಾ ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ಮುಂಬೈ ಹಾಗೂ ಉತ್ತರ ಪ್ರದೇಶದಲ್ಲಿ ಇ.ಡಿ ಅಧಿಕಾರಿಗಳು ಈ ಹಿಂದೆ ಶೋಧ ಕಾರ್ಯಾಚರಣೆ ನಡೆಸಿದ್ದರು.
‘ಕಳೆದ ನಾಲ್ಕು ವರ್ಷಗಳಿಂದ ತನಿಖೆ ನಡೆಯುತ್ತಿದ್ದು, ತನಿಖೆಗೆ ನಾನು ಸಂಪೂರ್ಣವಾಗಿ ಸಹಕರಿಸುತ್ತಿದ್ದೇನೆ’ ಎಂದು ರಾಜ್ ಕುಂದ್ರಾ ಶನಿವಾರ ಹೇಳಿದ್ದರು.
ಅಶ್ಲೀಲ ಚಿತ್ರಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಕುಂದ್ರಾ ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ಎರಡು ಪ್ರಕರಣಗಳು ಮತ್ತು ದೋಷಾರೋಪ ಪಟ್ಟಿಯ ಆಧಾರದಲ್ಲಿ 2022ರ ಮೇನಲ್ಲಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಕುಂದ್ರಾ ಮತ್ತು ಇತರರು ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.