ಪಣಜಿ: ಗೋವಾದಲ್ಲಿ ಕಡಲಾಚೆ ಕೆಸಿನೊ ನಡೆಸುವ ಹಡಗೊಂದರಲ್ಲಿ ಶೋಧ ಕಾರ್ಯ ಕೈಗೊಂಡಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಅಲ್ಲಿನ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಕ್ರೂಸ್ ಕೆಸಿನೊ ಪ್ರೈಡ್‌ನಲ್ಲಿ ಡಿ. 12ರಂದು ಈ ಘಟನೆ ನಡೆದಿದೆ. ಕ್ಯಾಸಿನೊ ನಿರ್ದೇಶಕ, ಇಬ್ಬರು ಹಿರಿಯ ಸಿಬ್ಬಂದಿ ಹಾಗು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಸಿನೊಗೆ ಗುರುವಾರ ತೆರಳಿದ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಪಲೂರಿ ಚನ್ನಕೇಶವ ರಾವ್ ಹಾಗೂ ಅವರ ತಂಡವನ್ನು ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕೆಸಿನೊ ನಿರ್ದೇಶಕ ಅಶೋಕ್ ವಾಡಿಯಾ, ಸಿಬ್ಬಂದಿಗಳಾದ ಗೋಪಾಲ ರಾಮನಾಥ ನಾಯ್ಕ್, ಆರತಿ ರಾಜಾ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಪಣಜಿ ಪೊಲೀಸರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಲಾಗಿದೆ. ಅಕ್ರಮವಾಗಿ ಬಂಧನದಲ್ಲಿಟ್ಟು, ಬೆದರಿಕೆಯನ್ನೂ ಹಾಕಲಾಗಿದೆ. ಶೋಧ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿದ್ದ ಕೆಲವೊಂದು ಮಹತ್ವದ ದಾಖಲೆಗಳನ್ನು ಆರೋಪಿಗಳು ನಾಶ ಮಾಡಿದ್ದಾರೆ ಎಂದೂ ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.