ADVERTISEMENT

‘ಕಮಲ’ ಮುಡಿದ ಈಶಾನ್ಯ ಸೋದರಿಯರು

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:45 IST
Last Updated 23 ಮೇ 2019, 19:45 IST
ಅಸ್ಸಾಂ ಗುವಾಹಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಸಂಭ್ರಮಾಚರಣೆ ಮಾಡಿದರು ಎಎಫ್‌ಪಿ ಚಿತ್ರ 
ಅಸ್ಸಾಂ ಗುವಾಹಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಸಂಭ್ರಮಾಚರಣೆ ಮಾಡಿದರು ಎಎಫ್‌ಪಿ ಚಿತ್ರ    

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವಿನ ನಗೆ ಬೀರಿವೆ. ಕಾಂಗ್ರೆಸ್‌ನ ಪ್ರಾಬಲ್ಯವನ್ನು ತಗ್ಗಿಸಿರುವ ಬಿಜೆಪಿ, ಪ್ರಾದೇಶಿಕ ಪಾಲುದಾರರಾದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ನೆಡಾ)ದ ಬೆಂಬಲದೊಂದಿಗೆ ಈ ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ.

ಅಸ್ಸಾಂನ 14 ಸ್ಥಾನಗಳ ಪೈಕಿ 3ರಲ್ಲಿ ಸ್ಪರ್ಧಿಸಿದ್ದ ಅಸ್ಸೋಂ ಗಣ ಪರಿಷದ್‌ (ಎಜಿಪಿ), ಹತ್ತು ಸ್ಥಾನಗಳನ್ನು ಬಿಜೆಪಿಗೆ ಮತ್ತು ಒಂದನ್ನು ಬೊಡೊ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಬಿಟ್ಟುಕೊಟ್ಟಿತ್ತು. ಈ ಪೈಕಿ9 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿದ್ದರೆ, ಬಿಪಿಎಫ್‌ ಒಂದು ಸ್ಥಾನದಲ್ಲಿ ಜಯ ಗಳಿಸಿದೆ. ಉಳಿದೆರಡು ಕ್ಷೇತ್ರಗಳಲ್ಲಿ ಇತರರು ಗೆಲುವಿನ ನಗೆ ಬೀರಿದ್ದಾರೆ. ಎಜಿಪಿ ಇಲ್ಲಿ ಗೆಲುವಿನ ಖಾತೆ ತೆರೆದಿಲ್ಲ.

ಮಿಜೋರಾಂನಲ್ಲಿಯೂ ಬಿಜೆಪಿ ಬೆಂಬಲಿತ ಪಕ್ಷವೇ ಗೆಲುವು ಸಾಧಿಸಿದೆ. ಈ ಕ್ಷೇತ್ರ 2014ರಲ್ಲಿ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು.ಮೇಘಾಲಯದ ತುರಾದಲ್ಲಿ ಎನ್‌ಪಿಪಿ ಅಭ್ಯರ್ಥಿ ಅಗಾಥ ಸಂಗ್ಮಾ, ಕಾಂಗ್ರೆಸ್‌ ಮುಖಂಡ ಮುಕುಲ್‌ ಸಂಗ್ಮಾ ಅವರನ್ನು 61 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ADVERTISEMENT

ಅರುಣಾಚಲ ಪ್ರದೇಶದ ಎರಡೂ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಪೂರ್ವ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ತಾಪಿರ್‌ ಗಾವೊ ಕಾಂಗ್ರೆಸ್‌ನ ಎಲ್‌. ವಾಂಗಲತ್‌ ಅವರನ್ನು ಪರಾಭವಗೊಳಿಸಿದ್ದಾರೆ. ಪಶ್ಚಿಮ ಕ್ಷೇತ್ರದಲ್ಲಿ ಕಣದಲ್ಲಿದ್ದ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಕಾಂಗ್ರೆಸ್‌ನ ಪ್ರಮುಖ ನಾಯಕ ನಬಮ್‌ ತುಕಿ ಅವರನ್ನು ಸೋಲಿಸಿದ್ದಾರೆ.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಕೊಕ್ರಝರ್‌ ಮತ್ತು ಗುವಾಹಟಿಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮಣಿಪುರದಲ್ಲಿ ಎರಡು ಸ್ಥಾನಗಳ ಪೈಕಿ ಒಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಉಳಿದ ಕ್ಷೇತ್ರ ಇತರರ ಪಾಲಾಗಿದೆ.ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಮೊದಲ ಮೂರು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.