ADVERTISEMENT

ಕೃಷಿ ಕಾಯ್ದೆ ಕುರಿತು ರೈತರೊಂದಿಗೆ 8ನೇ ಸುತ್ತಿನ ಮಾತುಕತೆ ನಡೆಸುತ್ತಿರುವ ಕೇಂದ್ರ

ಏಜೆನ್ಸೀಸ್
Published 8 ಜನವರಿ 2021, 11:34 IST
Last Updated 8 ಜನವರಿ 2021, 11:34 IST
ಕೇಂದ್ರ ಸಚಿವರೊಂದಿಗೆ ರೈತರ ಮಾತುಕತೆ
ಕೇಂದ್ರ ಸಚಿವರೊಂದಿಗೆ ರೈತರ ಮಾತುಕತೆ   

ನವದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ಎಂಟನೇ ಸುತ್ತಿನ ಮಾತುಕತೆ ನಡೆಯುತ್ತಿದೆ. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ರೈತ ಮುಖಂಡರೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, 'ಮಾತುಕತೆ ಸಕಾರಾತ್ಮಕ ವಾತಾವರಣದಲ್ಲಿ ನಡೆಯಲಿದೆ. ರೈತರ ಬೇಡಿಕೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ. ರೈತರ ಪ್ರತಿ ಮಾತುಗಳನ್ನೂ ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಿದ್ದೇವೆ' ಎಂದು ತಿಳಿಸಿದ್ದಾರೆ.

ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶುಕ್ರವಾರ ಒಂದು ಗಂಟೆ ಕಾಲ ಸಭೆ ನಡೆಸಿರುವುದಾಗಿ ಪಿಟಿಐ ವರದಿ ಮಾಡಿದೆ.

ADVERTISEMENT

'ನಾವು ಇಂದು ಅಂತಿಮ ನಿರ್ಣಯವೊಂದಕ್ಕೆ ಬರಬಹುದೆಂಬ ಭರವಸೆಯೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ಹೋಗುತ್ತಿದ್ದೇವೆ' ಎಂದು ರೈತ ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರ ನಿರಾಕರಿಸುತ್ತಿದೆ. ಆದರೆ ಇವುಗಳಿಂದ (ಕಾಯ್ದೆಗಳಿಂದ) ನಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜನವರಿ 26ರ ಒಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅದರಂತೆ ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್‌ ತಾಲೀಮು ಆರಂಭವಾಗಿದೆ.

ಜನವರಿ 4ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ವೇಳೆ ಸೆಪ್ಟೆಂಬರ್‌ನಲ್ಲಿ ಸರ್ಕಾರ ಅಂಗೀಕರಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.