ADVERTISEMENT

ಜಾರ್ಖಂಡ್ ವಿಧಾನಸಭೆಗೆ ನ. 30ರಿಂದ ಐದು ಹಂತಗಳಲ್ಲಿ ಚುನಾವಣೆ: ಡಿ.23ಕ್ಕೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 13:14 IST
Last Updated 1 ನವೆಂಬರ್ 2019, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 30ರಿಂದ ಐದು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಶುಕ್ರವಾರ ಸಂಜೆ ಘೋಷಿಸಿದೆ.ಡಿಸೆಂಬರ್ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ‘81 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಾರ್ಖಂಡ್‌ನಲ್ಲಿ ನವೆಂಬರ್ 30ರಂದು ಮೊದಲ ಹಂತದ ಮತದಾನ ನಡೆಯಲಿದೆ’ ಎಂದು ತಿಳಿಸಿದರು.

ಮತದಾನದ ಮೊದಲ ಹಂತ ನವೆಂಬರ್ 30, ಎರಡನೇ ಹಂತ ಡಿಸೆಂಬರ್ 7, ಮೂರನೇ ಹಂತ ಡಿಸೆಂಬರ್ 12, ನಾಲ್ಕನೇ ಹಂತ ಡಿಸೆಂಬರ್ 16 ಮತ್ತು ಐದನೇ ಹಂತ ಡಿಸೆಂಬರ್ 20ರಂದು ನಡೆಯಲಿದೆ.

ADVERTISEMENT

ಮೊದಲ ಹಂತದಲ್ಲಿ 13 ಕ್ಷೇತ್ರಗಳಿಗೆ ಮತ್ತು ನಂತರದ ಹಂತಗಳಲ್ಲಿ ಕ್ರಮವಾಗಿ 20, 17, 15, 16 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಜಾರ್ಖಂಡ್ ಹಾಲಿ ವಿಧಾನಸಭೆಯ ಅವಧಿ 2020ರ ಜನವರಿ 1ರಂದು ಕೊನೆಗೊಳ್ಳಲಿದೆ.

ನಕ್ಸಲ್‌ಪೀಡಿತ ರಾಜ್ಯವಾಗಿರುವುದರಿಂದ ಐದು ಹಂತಗಳ ಮತದಾನ ಅಗತ್ಯ ಎಂದು ಚುನಾವಣಾ ಆಯೋಗ ಹೇಳಿದೆ.

81 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳು ನಕ್ಸಲ್‌ಪೀಡಿತವಾಗಿವೆ. ನಕ್ಸಲ್‌ಪೀಡಿತ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದುಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತಿ ಈಗಿನಿಂದಲೇ ಜಾರಿಗೆ ಬಂದಿದೆ ಎಂದೂ ಅವರು ತಿಳಿಸಿದ್ದಾರೆ.

ನಕ್ಸಲ್‌ ಪೀಡಿತ ರಾಜ್ಯದಲ್ಲಿ 2014ರಲ್ಲಿಯೂ ಐದು ಹಂತಗಳಲ್ಲಿ ಮತದಾನವಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.