
ಸುಪ್ರೀಂ ಕೋರ್ಟ್
ಪಿಟಿಐ ಚಿತ್ರ
ನವದೆಹಲಿ (ಪಿಟಿಐ): ‘ಮತದಾರರನ್ನು ನೋಂದಣಿ ಮಾಡುವ ಉದ್ದೇಶದಿಂದ ಮಾತ್ರ ಅವರ ಪೌರತ್ವವನ್ನು ನಿರ್ಧರಿಸಬಹುದು. ಯಾರನ್ನಾದರೂ ಗಡಿಪಾರು ಮಾಡಬಹುದೇ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಚುನಾವಣಾ ಆಯೋಗವು (ಇ.ಸಿ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಚುನಾವಣಾ ಆಯೋಗದ ಪರ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠಕ್ಕೆ ಈ ವಿಷಯ ತಿಳಿಸಿದರು.
ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಪೀಠವು ಗುರುವಾರ ಪುನರಾರಂಭಿಸಿದೆ.
ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಲು ದ್ವಿವೇದಿ ಅವರು ವಿಚಾರಣೆಯ ಆರಂಭದಲ್ಲಿ ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸಿದರು. ಚುನಾವಣೆಯು ವಯಸ್ಕರ ಮತಾಧಿಕಾರವನ್ನು ಆಧರಿಸಿರಬೇಕು ಎಂಬುದನ್ನು 326ನೇ ವಿಧಿಯು ಸಾರುತ್ತದೆ ಎಂದರು.
‘ವಯಸ್ಕರ ಮತದಾನದ ಹಕ್ಕು ಮೂರು ವಿಭಿನ್ನ ಅಂಶಗಳನ್ನು ಒಳಗೊಂಡಿದೆ. ಮತದಾರರ ನೋಂದಣಿ ಹಂತದಲ್ಲಿ ಇವೆಲ್ಲವನ್ನೂ ದೃಢಪಡಿಸಬೇಕು. ಈ ಮೂರೂ ಷರತ್ತುಗಳನ್ನು ಪೂರೈಸದ ಹೊರತು, ಒಬ್ಬರು ಮತದಾರರಾಗಿ ನೋಂದಾಯಿಸಲು ಅರ್ಹರಾಗಿರುವುದಿಲ್ಲ’ ಎಂದು ದ್ವಿವೇದಿ ವಾದಿಸಿದರು.
ಒಬ್ಬ ವ್ಯಕ್ತಿಯ ಪೌರತ್ವ ದೃಢಪಡದಿದ್ದರೂ ಆತನನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದರೆ, ಅದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಹೇಳಿದರು.
ಅರ್ಜಿದಾರರಲ್ಲಿ ಒಬ್ಬರಾದ ‘ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ‘ಮತದಾನಕ್ಕೆ ಪೌರತ್ವವು ಪೂರ್ವಭಾವಿ ಷರತ್ತು ಎಂಬುದು ನಿರ್ವಿವಾದ. ಆದರೆ, ಪೌರತ್ವವನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ’ ಎಂದರು.
ಅದಕ್ಕೆ ಸಿಜೆಐ, ‘ನಾಗರಿಕರನ್ನು ಗುರುತಿಸುವುದಷ್ಟೇ ಆಯೋಗದ ಕೆಲಸ; ಪೌರತ್ವವನ್ನು ಅದರ ವಿಶಾಲ ಅರ್ಥದಲ್ಲಿ ನಿರ್ಣಯಿಸುವುದು ಅಲ್ಲ’ ಎಂದರು.
‘ಈ ವಿಚಾರದಲ್ಲಿ ಚುನಾವಣಾ ಆಯೋಗವು ಸೀಮಿತ ಅಧಿಕಾರವನ್ನು ಹೊಂದಿದೆ. ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಮಾತ್ರ ಆಯೋಗವು ಪೌರತ್ವವನ್ನು ನಿರ್ಧರಿಸುತ್ತದೆ. ನಾವು ಯಾರನ್ನೂ ಗಡಿಪಾರು ಮಾಡಲು ಸಾಧ್ಯವಿಲ್ಲ ಅಥವಾ ಭಾರತದಲ್ಲಿ ನೆಲಸಲು ವ್ಯಕ್ತಿಗೆ ವೀಸಾ ಇದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ದ್ವಿವೇದಿ ಸ್ಪಷ್ಟಪಡಿಸಿದರು.
ಚುನಾವಣಾ ಆಯೋಗವು ಪೌರತ್ವವನ್ನು ನೀಡುವ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯಕ್ತಿ ನಿಜವಾಗಿಯೂ ಈ ದೇಶದ ಪ್ರಜೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರ ಹೊಂದಿದೆ ಎಂದು ಹೇಳಿದ ಪೀಠ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.