ADVERTISEMENT

EC ಬಗ್ಗೆ ಚರ್ಚೆಗಿಲ್ಲ ಅವಕಾಶ | ಸಂಸತ್ತಿನ ಅಧಿಕಾರದ ಉಲ್ಲಂಘನೆ: ಒಬ್ರಯಾನ್

ಪಿಟಿಐ
Published 21 ನವೆಂಬರ್ 2025, 15:31 IST
Last Updated 21 ನವೆಂಬರ್ 2025, 15:31 IST
ಡೆರೆಕ್ ಒಬ್ರಯಾನ್
ಡೆರೆಕ್ ಒಬ್ರಯಾನ್   

ನವದೆಹಲಿ: ‘ಚುನಾವಣಾ ಆಯೋಗದ ಕುರಿತು ಸಂಸದರು ಚರ್ಚಿಸುವಂತಿಲ್ಲ’ ಎಂಬ ಸರ್ಕಾರದ ಹೇಳಿಕೆಯು ಸಂಸತ್ತಿನ ಅಧಿಕಾರದ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್‌ ಆರೋಪಿಸಿದ್ದಾರೆ.

ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

‘ಸಂಸತ್ತಿನ ಕಳೆದ ಎರಡು ಅಧಿವೇಶನಗಳಲ್ಲಿ ಟಿಎಂಸಿ, ಕಾಂಗ್ರೆಸ್, ಎಸ್‌ಪಿ, ಡಿಎಂಕೆ, ಎಎಪಿ, ಆರ್‌ಜೆಡಿ, ಶಿವಸೇನಾ (ಯುಬಿಟಿ), ಜೆಎಂಎಂ ಮತ್ತು ಇತರ ಪಕ್ಷಗಳು ಚುನಾವಣಾ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಬೇಕಿರುವುದರ ಕುರಿತು ಚರ್ಚೆಗೆ ಆಗ್ರಹಿಸಿ 100ಕ್ಕೂ ಹೆಚ್ಚು ನೋಟಿಸ್‌ಗಳನ್ನು ಸಲ್ಲಿಸಿದ್ದವು. ಆದರೆ ಚರ್ಚೆಗೆ ಅವಕಾಶ ನೀಡಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಚುನಾವಣಾ ಆಯೋಗದ ಬಜೆಟ್‌ಅನ್ನು ಕೇಂದ್ರ ಸರ್ಕಾರವು ಕಾನೂನು ಸಚಿವಾಲಯದ ಮೂಲಕ ಮಂಡಿಸುತ್ತದೆ ಹಾಗೂ ಅದು ಸಂಸತ್ತಿನ ಅನುಮೋದನೆಗೆ ಒಳಪಟ್ಟಿರುತ್ತದೆ. ಚುನಾವಣಾ ಆಯೋಗದ ಖರ್ಚು ವೆಚ್ಚದ ಅಧಿಕಾರವನ್ನು ತನ್ನಲ್ಲಿ ಹಿಡಿದಿಟ್ಟುಕೊಂಡಿರುವುದರಿಂದ ಅದರ ಕಾರ್ಯವೈಖರಿಯನ್ನು ಪರಿಶೀಲಿಸುವ ಮತ್ತ ಚರ್ಚಿಸುವ ಅಧಿಕಾರ ಸಂಸತ್ತಿಗೆ ಇದೆ’ ಎಂದಿದ್ದಾರೆ.

‘ಆದ್ದರಿಂದ, ಚುನಾವಣಾ ಆಯೋಗದ ಬಜೆಟ್‌ಅನ್ನು ಅನುಮೋದಿಸುವ ಸಂಸದರು ಆ ಸಂಸ್ಥೆಯ‌ ಬಗ್ಗೆ ಚರ್ಚಿಸುವ ಹಕ್ಕನ್ನು ಹೊಂದಿಲ್ಲ ಎಂದು ಸರ್ಕಾರ ಹೇಳಿದರೆ ಅದು ಸಂಸತ್ತಿನ ಅಧಿಕಾರದ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.