ADVERTISEMENT

ರಾಹುಲ್‌ ವಿರುದ್ಧ EC ಆಕ್ಷೇಪಾರ್ಹ ಪ್ರತಿಕ್ರಿಯೆ ಸಲ್ಲ: ಮಾಜಿ ಸಿಇಸಿ ಖುರೇಷಿ

ಮತ ಕಳ್ಳತನ: ತನಿಖೆಗೆ ಆದೇಶಿಸಬೇಕಿತ್ತು

ಪಿಟಿಐ
Published 14 ಸೆಪ್ಟೆಂಬರ್ 2025, 13:05 IST
Last Updated 14 ಸೆಪ್ಟೆಂಬರ್ 2025, 13:05 IST
ಎಸ್‌.ವೈ.ಖುರೇಷಿ
ಎಸ್‌.ವೈ.ಖುರೇಷಿ   

ನವದೆಹಲಿ: ‘ಮತ ಕಳ್ಳತನ’ ಕುರಿತಂತೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿಬೇಕಿತ್ತು. ಬದಲಾಗಿ ಅದು ಅವರ ವಿರುದ್ಧ ‘ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿ’ ಟೀಕೆಗಳನ್ನು ಮಾಡುತ್ತಿದೆ ಎಂದು ಆಯೋಗದ ಮಾಜಿ ಮುಖ್ಯ ಆಯುಕ್ತ ಎಸ್‌.ವೈ.ಖುರೇಷಿ ಭಾನುವಾರ ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ಚುನಾವಣಾ ಆಯೋಗದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಅವರ ಕೃತಿ ‘ಡೆಮಾಕ್ರಸಿಸ್ ಹಾರ್ಟ್‌ಲ್ಯಾಂಡ್‌’ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಅವರು ಈ ಸಂದರ್ಶನ ನೀಡಿದ್ದಾರೆ. ಜಗರ್ನಾಟ್‌ ಬುಕ್ಸ್‌ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.

‘ಮತ ಕಳ್ಳತನ ಕುರಿತು ಆರೋಪಿಸುವ ವೇಳೆ ರಾಹುಲ್‌ ಗಾಂಧಿ ಅವರು ‘ಜಲಜನಕ ಬಾಂಬ್‌’ನಂತಹ ಪದ ಬಳಕೆ ಮಾಡಿದ್ದಾರೆ. ಮತ ಕಳ್ಳತನದ ಗಂಭೀರತೆಯನ್ನು ವಿವರಿಸಲು ಅವರು ಇಂತಹ ಆಲಂಕಾರಿಕ ಭಾಷೆ ಬಳಸಿದ್ದಾರೆ. ಆದರೆ, ಅವರು ಪ್ರಸ್ತಾಪಿಸಿರುವ ದೂರುಗಳ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯ ಇದೆ’ ಎಂದು ಖುರೇಷಿ ಹೇಳಿದ್ದಾರೆ.

ADVERTISEMENT

‘ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸಮಸ್ಯೆಯನ್ನು ಹುಟ್ಟುಹಾಕಿರುವ ಜೊತೆಗೆ, ಜೇನುಗೂಡಿಗೆ ಕೈಹಾಕಿದಂತಾಗಿದೆ. ಇದು ಆಯೋಗಕ್ಕೇ ಸಂಕಷ್ಟ ತಂದೊಡ್ಡಲಿದೆ’ ಎಂದು ಪ್ರತಿಪಾದಿಸಿದರು.

ಚುನಾವಣಾ ಆಯೋಗ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಡಳಿತಾರೂಢ ಪಕ್ಷಗಳನ್ನು ಓಲೈಸುವ ಅಗತ್ಯವಿಲ್ಲ. ಅಧಿಕಾರದಿಂದ ಹೊರಗೆ ಇರುವ ವಿಪಕ್ಷಗಳ ಮಾತಿಗೆ ಮಹತ್ವ ನೀಡಬೇಕು. ನಾನು ಆಯುಕ್ತನಾಗಿದ್ದಾಗ ಅವುಗಳಿಗೇ ಆದ್ಯತೆ ನೀಡುತ್ತಿದ್ದೆ
ಎಸ್‌.ವೈ.ಖುರೇಷಿ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ 

ಪ್ರಮುಖ ಅಂಶಗಳು

* ತನ್ನ ಕಾರ್ಯವೈಖರಿ ಬಗ್ಗೆ ಟೀಕೆಗಳು ಕೇಳಿ ಬಂದಾಗ ಚುನಾವಣಾ ಆಯೋಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾನು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಶಕ್ತಿಗಳ ಕುರಿತು ಎಚ್ಚರದಿಂದಿರಬೇಕು.

* ನಾನು ಮುಖ್ಯ ಆಯುಕ್ತನಾಗಿದ್ದ ವೇಳೆ ನನ್ನ ಕಚೇರಿ ಬಾಗಿಲು ಎಲ್ಲರಿಗೂ ಮುಕ್ತಗೊಳಿಸಿದ್ದೆ. ವಿಪಕ್ಷಗಳ ಮಾತುಗಳನ್ನು ತಕ್ಷಣವೇ ಆಲಿಸಬೇಕು ಅವುಗಳೊಂದಿಗೆ ಮಾತುಕತೆ ನಡೆಸಿ ಪರಿಹಾರ ಒದಗಿಸುವಂತೆ ನನ್ನ ಸಿಬ್ಬಂದಿಗೆ ಸೂಚಿಸಿದ್ದೆ.

* ಈಗ ಪರಿಸ್ಥಿತಿ ಭಿನ್ನ. ತಾವು ಎತ್ತಿರುವ ಪ್ರಶ್ನೆಗಳ ವಿಚಾರವಾಗಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬೇಕಾಗಿದೆ. ತಮ್ಮ ಮಾತುಗಳನ್ನು ಯಾರೂ ಆಲಿಸುತ್ತಿಲ್ಲ ಎಂಬುದು 23 ಪಕ್ಷಗಳ ದೂರಾಗಿದೆ

* ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ. ಅವರು ಕೋಟ್ಯಂತರ ಜನರನ್ನು ಪ್ರತಿನಿಧಿಸುತ್ತಾರೆ. ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದು ಚುನಾವಣಾ ಆಯೋಗಕ್ಕೆ ಶೋಭೆ ತರದು.

* ರಾಹುಲ್‌ ಗಾಂಧಿ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಿದಾಗ ಸತ್ಯ ಹೊರಬರುತ್ತದೆ. ಆಕ್ರಮಣಕಾರಿ ಪ್ರತಿಕ್ರಿಯೆ ನೀಡುವ ಬದಲು ತನಿಖೆ ನಡೆಸಬೇಕಿತ್ತು. ಇಂತಹ ಅವಕಾಶವನ್ನು ಆಯೋಗ ಕಳೆದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.